ಯುವಕನ ಭೀಕರ ಕೊಲೆ, ಆರೋಪಿಗಳಿಗಾಗಿ ಶೋಧ ಕಾರ್ಯ
ಗದಗ, 29 ಮಾರ್ಚ್ (ಹಿ.ಸ.) ಆ್ಯಂಕರ್: ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ 27 ವರ್ಷದ ಯುವಕನೊಬ್ಬನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದೆ.
ಫೋಟೋ


ಗದಗ, 29 ಮಾರ್ಚ್ (ಹಿ.ಸ.)

ಆ್ಯಂಕರ್: ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ 27 ವರ್ಷದ ಯುವಕನೊಬ್ಬನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಮನೆಯಿಂದ ಹೊರಗೆ ಹೋದ ಚಂದ್ರು, ನಿನ್ನೆ ಶನಿವಾರ ಗ್ರಾಮ ಹೊರವಲಯದ ಬ್ರಿಡ್ಜ್ ಕೆಳಭಾಗದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಶವದ ಸ್ಥಿತಿಯನ್ನು ಇಂದು ಗಮನಿಸಿದ ಕುಟುಂಬಸ್ಥರು, ಇದು ಸಹಜ ಸಾವು ಅಲ್ಲ, ಕೊಲೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೃತನ ಕುಟುಂಬಸ್ಥರ ಪ್ರಕಾರ, ಎದುರು ಮನೆಯವರೊಂದಿಗೆ ಚಂದ್ರುಗೆ ಹಿಂದಿನಿಂದಲೂ ವೈಷಮ್ಯ ಇತ್ತು. ವಿಶೇಷವಾಗಿ ಅವರ ಮನೆಯ ಹೆಣ್ಣುಮಕ್ಕಳ ವಿಚಾರವಾಗಿ ಅನುಮಾನ ವ್ಯಕ್ತಪಡಿಸಿ ಹಲವು ಬಾರಿ ಜಗಳಗಳಾಗಿದ್ದವು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಚಂದ್ರು ಮೇಲೆ ಬೈಕ್ ಹತ್ತಿಸಲು ಕೂಡ ಯತ್ನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ, ಎದುರು ಮನೆಯವರೇ ಈ ಕೃತ್ಯ ನಡೆಸಿರಬಹುದೆಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಮಗನ ಸಾವಿಗೆ ನ್ಯಾಯ ಒದಗಿಸಬೇಕೆಂದು ಮೃತನ ತಂದೆ ಬಸವರಾಜ್ ಆಗ್ರಹಿಸಿದ್ದಾರೆ. “ನನ್ನ ಮಗ ಒಳ್ಳೆಯ ಹುಡುಗ. ಯಾರಿಗೂ ತೊಂದರೆ ಕೊಡ್ಲಿಲ್ಲ. ಅವನನ್ನು ಕೊಂದವರನ್ನು ನಾನು ಬಿಡಲ್ಲ. ಮೂರು ಎಕರೆ ಹೊಲ ಹೋದ್ರೂ ಪರವಾಗಿಲ್ಲ, ನ್ಯಾಯಕ್ಕಾಗಿ ಹೋರಾಟ ಮಾಡ್ತೀನಿ” ಎಂದು ಕಣ್ಣೀರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದ್ರು ಕುಟುಂಬದ ಹಿರಿಯ ಪುತ್ರನಾಗಿದ್ದು, ಅವನ ಮದುವೆ ಮಾಡಲು ಕುಟುಂಬ ಸಿದ್ಧತೆ ನಡೆಸುತ್ತಿತ್ತು. ಬೀರ್ಲಿಂಗೇಶ್ವರ ಜಾತ್ರೆಯ ಬಳಿಕ ಮದುವೆ ಮಾಡಲು ಯೋಜನೆ ಹಾಕಿಕೊಂಡಿದ್ದ ಕುಟುಂಬದ ಕನಸು ಈ ಘಟನೆతో ನುಚ್ಚುನೂರಾಗಿದೆ. ಮಗನನ್ನು ಕಳೆದುಕೊಂಡ ತಂದೆ-ತಾಯಿಯ ದುಃಖ ಮುಗಿಲುಮುಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಳಿಕ ನಿಖರ ಕಾರಣ ತಿಳಿಯಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande