
ಬಾಗಲಕೋಟೆ, 27 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ನಗರದಲ್ಲಿ ಪೆಟ್ರೋಲ್ ಪೂರೈಕೆಯಲ್ಲಿ ದಿಢೀರ್ ವ್ಯತ್ಯಯ ಉಂಟಾಗಿದ್ದು, ಇಂಧನಕ್ಕಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಕಳೆದ ಎರಡು ದಿನಗಳಿಂದ ಪೆಟ್ರೋಲ್ ಸರಬರಾಜು ಸಮರ್ಪಕವಾಗಿ ಆಗದ ಹಿನ್ನೆಲೆ ನಗರದಲ್ಲಿನ ಬಹುತೇಕ ಪೆಟ್ರೋಲ್ ಬಂಕ್ಗಳು ಖಾಲಿಯಾಗಿದ್ದು, ‘ನೋ ಸ್ಟಾಕ್’ ಬೋರ್ಡ್ಗಳು ರಾರಾಜಿಸುತ್ತಿವೆ. ಇದರಿಂದ ಪೆಟ್ರೋಲ್ ಸಿಗದೆ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸದ್ಯ ನಗರದಲ್ಲಿ ಡೀಸೆಲ್ ಮಾತ್ರ ಲಭ್ಯವಿದ್ದು, ಪೆಟ್ರೋಲ್ ವಾಹನಗಳು ರಸ್ತೆಯಲ್ಲೇ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರೈಕೆಯ ಸರಪಳಿಯಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಯೇ ಈ ಸಮಸ್ಯೆಗೆ ಮೂಲ ಕಾರಣ ಎಂದು ತಿಳಿದು ಬಂದಿದೆ.
ಪ್ರಸ್ತುತ ನಗರದಲ್ಲಿನ ಜಿಯೋ ಪೆಟ್ರೋಲ್ ಬಂಕ್ನಲ್ಲಿ ಮಾತ್ರ ಪೆಟ್ರೋಲ್ ಲಭ್ಯವಿದ್ದು, ಅಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ಜನಸಂದಣಿಯನ್ನು ನಿಯಂತ್ರಿಸಲು ಹಾಗೂ ಎಲ್ಲರಿಗೂ ಇಂಧನ ಸಿಗುವಂತೆ ಮಾಡಲು ಬಂಕ್ ಮಾಲೀಕರು ಮಿತಿಯನ್ನು ವಿಧಿಸಿದ್ದಾರೆ.
ಒಬ್ಬರಿಗೆ ಗರಿಷ್ಠ 200 ರೂಪಾಯಿ ಮೊತ್ತದ ಪೆಟ್ರೋಲ್ ಮಾತ್ರ ನೀಡಲಾಗುತ್ತಿದ್ದು, ಡೀಸೆಲ್ ವಾಹನಗಳಿಗೆ 1,000 ರೂಪಾಯಿಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಅನಿವಾರ್ಯವಾಗಿ ವಾಹನ ಸವಾರರು ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಅಲ್ಪ ಪ್ರಮಾಣದ ಇಂಧನ ಪಡೆದು ವಾಪಸ್ಸಾಗುತ್ತಿರುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande