
ಗದಗ, 26 ಮಾರ್ಚ್ (ಹಿ.ಸ.)
ಆ್ಯಂಕರ್:- ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ, ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಜನರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸಿಲಿಂಡರ್ ಸಿಗದೆ ಜನರು ಹಾಹಾಕಾರ ಎಬ್ಬಿಸಿದ್ದು, ನಸುಕಿನಿಂದಲೇ ಕಿಲೋಮೀಟರ್ಗಳಷ್ಟು ಉದ್ದದ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ
ಗದಗ ಜಿಲ್ಲೆಯ ನರಗುಂದ ಪಟ್ಟಣದ ಸಿದ್ದನಬಾವಿ ಓಣಿಯಲ್ಲಿರುವ ಇಂಡಿಯನ್ ಗ್ಯಾಸ್ ಏಜೆನ್ಸಿಯ ಮುಂದೆ ಜನರು ಬೆಳಗಿನ ಜಾವದಿಂದಲೇ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಖಾಲಿ ಸಿಲಿಂಡರ್ ಹಿಡಿದು ಊಟ-ನಿದ್ದೆ ಬಿಟ್ಟು ಕಾಯುತ್ತಿರುವ ಜನರು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರೂ ಸಹ ಇಲ್ಲಿ ಬಂದು ಸಾಲಿನಲ್ಲಿ ನಿಂತು ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಪ್ರತಿ ದಿನ ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಮಾತ್ರ ಸಿಲಿಂಡರ್ ವಿತರಣೆ ನಡೆಯುತ್ತಿದ್ದು, ಅಷ್ಟು ಕಡಿಮೆ ಸಮಯದಲ್ಲಿ ಎಲ್ಲರಿಗೂ ಸಿಲಿಂಡರ್ ಸಿಗದೇ ಅನೇಕರು ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ. ಹೀಗಾಗಿ ಜನರಲ್ಲಿ ಆತಂಕ ಮತ್ತು ಆಕ್ರೋಶ ಹೆಚ್ಚುತ್ತಿದೆ.
“ನಾಲ್ಕು ದಿನಗಳಿಂದ ಬರುತ್ತಿದ್ದೇವೆ, ಆದರೂ ಸಿಲಿಂಡರ್ ಸಿಗುತ್ತಿಲ್ಲ. ಬೆಳಿಗ್ಗೆ ಬೇಗ ಬಂದ್ರೂ ಸಾಲಿನಲ್ಲಿ ನಿಲ್ಲಬೇಕು, ಆದರೂ ಖಾಲಿ ಕೈಯಲ್ಲಿ ಮನೆಗೆ ಹೋಗಬೇಕಾಗುತ್ತಿದೆ,” ಎಂದು ಸಿಲಿಂಡರ್ ತೆಗೆದುಕೊಳ್ಳಲು ಬಂದ ಮಲ್ಲಪ್ಪ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದ ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ ಎಂದು ಹೇಳಲಾಗುತ್ತಿದ್ದರೂ, ನರಗುಂದ ಪಟ್ಟಣದಲ್ಲಿ ವಾಸ್ತವ ಸ್ಥಿತಿ ಭಿನ್ನವಾಗಿದೆ. ಕಳೆದ ಹಲವು ದಿನಗಳಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಈ ಸಮಸ್ಯೆ ಕುರಿತು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಬಂಡಾಯದ ನಾಡು ನರಗುಂದದಲ್ಲಿ ಸಿಲಿಂಡರ್ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP