
ಗದಗ, 26 ಮಾರ್ಚ್ (ಹಿ.ಸ.)
ಆ್ಯಂಕರ್:-ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ವಿಭಾಗದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯು ಜರುಗಿತು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ ಹೆಚ್.ಐ.ವಿ. ಲಕ್ಷಣಗಳನ್ನು ಗುರುತಿಸಿ, ಕ್ಯೂ-ಆರ್ ಕೋಡ್ನ್ನು ಸ್ಕ್ಯಾನ್ ಮಾಡಿ, ಹೆಚ್.ಐ.ವಿ. ಸ್ಥಿತಿಯನ್ನು ತಿಳಿದುಕೊಳ್ಳಿ ಹಾಗೂ ಹೆಚ್.ಐ.ವಿ. ಸೋಂಕಿತರಿಗೆ ಆತ್ಮ ಸ್ಥೈರ್ಯ, ಮಾನಸಿಕ ಬೆಂಬಲ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕು, ಶಾಲಾ ಕಾಲೇಜುಗಳಲ್ಲಿ ಹೆಚ್.ಐ.ವಿ. ಕುರಿತು ಅರಿವು ಕಾರ್ಯಕ್ರಮಗಳನ್ನು ಮಾಡಬೇಕು. ಹೆಚ್.ಐ.ವಿ ಪೀಡಿತರಿಗೆ ತಾರತಮ್ಯವಿಲ್ಲದೆ ಬದುಕಲು ಸಹಾಯ ಮಾಡುವುದು, ಉದ್ಯೋಗ ಮತ್ತು ಶಿಕ್ಷಣಕ್ಕೆ ಬೆಂಬಲ ನೀಡಬೇಕೆಂದು ಹೇಳಿದರು.
ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮದ ಗುರಿಗಳನ್ನು ಜಿಲ್ಲಾ ಮಟ್ಟದಲ್ಲಿ ಸಾಧಿಸುವ ನಿಟ್ಟಿನಲ್ಲಿ ಮೊದಲನೇ 95 ಹೆಚ್.ಐ.ವಿ. ಸೋಂಕಿತ ವ್ಯಕ್ತಿಗಳಲ್ಲಿ ಕನಿಷ್ಠ 95% ಜನರು ತಮ್ಮ ಸೋಂಕಿನ ಸ್ಥಿತಿಯನ್ನು ತಿಳಿದುಕೊಳ್ಳುವುದು, ಏರಡನೇ 95 ಸೋಂಕು ಧೃಢಪಟ್ಟವರಲ್ಲಿ ಕನಿಷ್ಠ 95% ಜನರು ನಿರಂತರ ಏ.ಆರ್.ಟಿ ಚಿಕಿತ್ಸೆ ಪಡೆಯುವುದು, ಹಾಗೂ ಮೂರನೇ ಹಂತದಲ್ಲಿ 99 ಏ.ಆರ್.ಟಿ ಚಿಕಿತ್ಸೆ ಪಡೆಯುವವರು 99% ಜನರು ವೈರಲ್ ಲೋಡ್ ನಿಯಂತ್ರಣ ಸಾಧಿಸುವುದು. ಹೆಚ್.ಐ.ವಿ., ಸಿಫಿಲಿಸ್, ಹೆಪ್ಟೆಟಿಸ್ ತ್ರಿವಳಿ ರೋಗಗಳು ತಾಯಿಯಿಂದ ಮಗುವಿಗೆ ಹರಡುವುದನ್ನು ಶೂನ್ಯಗೊಳಿಸಲಾಗಿದ್ದು, ಈ ರೋಗದ ಬಗ್ಗೆ ತಪ್ಪು ಕಲ್ಪನೆಗಳಿದ್ದು ಅವುಗಳನ್ನು ನಿವಾರಿಸಲು ಜಾಗೃತಿ ಮೂಡಿಸಲು, ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಹೆಚ್.ಐ.ವಿ. ರೋಗವನ್ನು ತಡೆಗಟ್ಟಲು ಸೋಂಕಿತರಿಗೆ ಮಾನವೀಯತೆ ತೋರಿಸುವುದೇ ಮುಖ್ಯ ಉದ್ದೇಶವಾಗಿದ್ದು ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಸೋಂಕಿತರ ವಿವರ ಪಡೆದು ಚಿಕಿತ್ಸೆ ಪಡೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು, ಹೊಸ ಸೋಂಕನ್ನು ಪತ್ತೆ ಹಚ್ಚಲು ಕ್ಯೂ-ಆರ್ ಕೋಡ್ ಬಳಸಿ ನಿಮ್ಮ ಹೆಚ್.ಐ.ವಿ. ಸ್ಥಿತಿಯನ್ನು ತಿಳಿದುಕೊಳ್ಳಿ ಎನ್ನುವಂತೆ ಎಲ್ಲ ಹೆಚ್.ಆರ್.ಜಿ. ಮತ್ತು ಸಮುದಾಯವನ್ನು ಹೆಚ್.ಐ.ವಿ. ತಪಾಸಣೆ ಮಾಡಿಸುವಂತೆ ಮನವೊಲಿಸಲು ತಿಳಿಸಿದರು. ಕಾರ್ಯಕ್ರಮದ ಪ್ರಗತಿಯನ್ನು ಹೆಚ್ಚಿಸಲು ಎನ್.ಜಿ.ಓ ಸಿಬ್ಬಂದಿಯೊಂದಿಗೆ ಚರ್ಚಿಸಿದಾಗ ಸಕಾಲದಲ್ಲಿ ಅನುದಾನ ಬಿಡುಗಡೆಯಾಗುವುದಿಲ್ಲ ಎಂದು ಎನ್.ಜಿ.ಓ ಪ್ರತಿನಿಧಿ ತಿಳಿಸಿದರು, ಸದರಿ ವಿಷಯವನ್ನು ಚರ್ಚಿಸಿ ಎನ್.ಜಿ.ಓ.ಗಳಿಗೆ ಸಕಾಲದಲ್ಲಿ ಅನುದಾನ ಬಿಡುಗಡೆಗೊಳಿಸಲು ಮೇಲಾಧಿಕಾರಿಗಳೋಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಡಿ.ಹೆಚ್.ಓ ರವರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಎಸ್.ವಿ.ಯಾವ್.ಎಂ. ಸಂಯೋಜನಕರಾದ ಡಾ. ದೀಪಕ ರವರು 95:95:99 ಹಾಗೂ ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮದ ಕುರಿತು ವಿವರವಾದ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಮಿಷನ್ ಏಡ್ಸ ಸುರಕ್ಷಾ ಅಭಿಯಾನ-2026ರ ನಿಮ್ಮ ಹೆಚ್.ಐ.ವಿ. ಸ್ಥಿತಿಯನ್ನು ತಿಳಿದುಕೊಳ್ಳಿ ಎನ್ನುವ ಕ್ಯೂ-ಆರ್ ಕೋಡ್ ಪೋಸ್ಟರನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಬಿ.ಸಿ. ಕರಿಗೌಡರ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕೆ., ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ ಕೆ.ಎಸ್., ಮೆಡಿಕಲ್ ಕಾಲೇಜಿನ ಡಾ. ರಮೇಶ, ಎಲ್ಲ ತಾಲೂಕಾ ಆರೋಗ್ಯಾಧಿಕಾರಿಗಳು, ಎನ್.ಜಿ.ಓ. ಸಿ.ಬಿ.ಓ. ಸಿಬ್ಬಂದಿಗಳು ಎಸ್.ವಿ.ವಾಯ್.ಎಂ. ಕೋ-ಆರ್ಡಿನೇಟರ್ ಹಾಜರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಬಿ.ಬಿ. ಲಾಳಗಟ್ಟಿ ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP