
ಬೆಂಗಳೂರು, 26 ಮಾರ್ಚ್ (ಹಿ.ಸ.):
ಆ್ಯಂಕರ್:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ತಿನಲ್ಲಿ 2026-27ನೇ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಾ, ರಾಜ್ಯದ ಆರ್ಥಿಕ ಸ್ಥಿತಿಗೆ ಕೇಂದ್ರ ಸರ್ಕಾರದ ಅನುದಾನ ಕೊರತೆಯೇ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದರು.
ಬಜೆಟ್ ಕುರಿತು ಆಡಳಿತ ಹಾಗೂ ವಿರೋಧಪಕ್ಷ ಸದಸ್ಯರು ನೀಡಿದ ವಿಮರ್ಶೆ, ಟೀಕೆ ಹಾಗೂ ಸಲಹೆಗಳನ್ನು ಸ್ವಾಗತಿಸಿದ ಸಿಎಂ, ಸರ್ಕಾರ ನೀಡಿರುವ ಅಂಕಿಅಂಶಗಳು ನಿಖರವಾಗಿದ್ದು, ವಾಸ್ತವಾಧಾರಿತವಾಗಿವೆ ಎಂದು ಹೇಳಿದರು. ಜಿಎಸ್‌ಟಿ ಪರಿಹಾರ ಮತ್ತು ಕೇಂದ್ರ ಅನುದಾನ ಸರಿಯಾಗಿ ಲಭ್ಯವಾಗದ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ರೆವಿನ್ಯೂ ಡೆಫಿಸಿಟ್ ಕಂಡುಬಂದಿದೆ ಎಂದು ತಿಳಿಸಿದರು.
14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ 4.713% ಪಾಲು ದೊರೆತಿದ್ದರೆ, 15ನೇ ಆಯೋಗದಲ್ಲಿ ಅದು 3.647%ಕ್ಕೆ ಇಳಿದು, ರಾಜ್ಯಕ್ಕೆ ಸುಮಾರು ₹11,495 ಕೋಟಿ ನಷ್ಟವಾಗಿದೆ ಎಂದು ಹೇಳಿದರು. ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾದ ₹5,300 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ನಿಯೋಗದ ಮೂಲಕ ಕೇಂದ್ರದ ಮೇಲೆ ಒತ್ತಡ ತರಬೇಕಾಗಿದೆ ಎಂದರು.
ರೆವಿನ್ಯೂ ಡೆಫಿಸಿಟ್ ಕುರಿತು ವಿರೋಧಪಕ್ಷದ ಟೀಕೆಗೆ ಉತ್ತರಿಸಿದ ಅವರು, ಜಿಎಸ್‌ಟಿ ಪರಿಷ್ಕರಣೆಗಳಿಂದ ₹10,000 ಕೋಟಿ, ಜಲ ಜೀವನ್ ಮಿಷನ್‌ನಲ್ಲಿ ₹15,000 ಕೋಟಿ ನಷ್ಟ ಹಾಗೂ ಜಿಎಸ್‌ಟಿ ಪರಿಹಾರ ಸ್ಥಗಿತವೇ ಇದಕ್ಕೆ ಕಾರಣ ಎಂದರು.
ತೆರಿಗೆ ಸಂಗ್ರಹ ಗುರಿಗಳು ಅವೈಜ್ಞಾನಿಕ ಎಂಬ ಆರೋಪವನ್ನು ತಳ್ಳಿಹಾಕಿದ ಸಿಎಂ, 2026-27ರಲ್ಲಿ ಒಟ್ಟು ₹1.25 ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ ಇಡಲಾಗಿದ್ದು, ಅಬಕಾರಿ, ನೋಂದಣಿ ಮತ್ತು ವಾಹನ ತೆರಿಗೆಗಳಲ್ಲಿ ಸಮಂಜಸ ಗುರಿಗಳನ್ನು ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ನೀಡುವಲ್ಲಿ ಅವು ಮಹತ್ವದ ಪಾತ್ರ ವಹಿಸಿವೆ ಎಂದರು. 2026-27ರಲ್ಲಿ ಗ್ಯಾರಂಟಿಗಳಿಗೆ ₹51,286 ಕೋಟಿ ಮೀಸಲಿಟ್ಟಿದ್ದು, ಈಗಾಗಲೇ ₹1.31 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು. ಇವುಗಳನ್ನು ಟೀಕಿಸುವ ಬಿಜೆಪಿ, ಇತರೆ ರಾಜ್ಯಗಳಲ್ಲಿ ಇದೇ ಮಾದರಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, 2026-27ರಲ್ಲಿ ₹84,567 ಕೋಟಿ ಬಂಡವಾಳ ವೆಚ್ಚ ನಿಗದಿಪಡಿಸಿದ್ದು, ಇದು ಇತರೆ ಪ್ರಮುಖ ರಾಜ್ಯಗಳಿಗಿಂತ ಹೆಚ್ಚು ಎಂದರು. ನೀರಾವರಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆ, ರಾಜ್ಯ ಸರ್ಕಾರ ಆರ್ಥಿಕತೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಕೇಂದ್ರದ ಅನುದಾನ ಅನ್ಯಾಯದ ನಡುವೆಯೂ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa