

ಬಳ್ಳಾರಿ, 26 ಮಾರ್ಚ್ (ಹಿ.ಸ.)
ಆ್ಯಂಕರ್ : ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಆಗ್ರಹಿಸಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಜಿಲ್ಲಾ ಘಟಕವು ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿಭಟನಾನಿರತರು ನೇರ ನೇಮಕಾತಿಯ ಜೊತೆಗೆ ಪದೋನ್ನತಿಯಲ್ಲೂ ಹಾಗೂ ಬ್ಯಾಕ್ಲಾಗ್, ಕೆಐಎಡಿಬಿ, ಬಿಡಿಎ ಹಾಗೂ ಸರ್ಕಾರಿ ಗುತ್ತಿಗೆ ನೇರಿ ಎಲ್ಲಾ ಕ್ಷೇತ್ರಗಳಲ್ಲಿ ಒಳ ಮೀಸಲಾತಿಯನ್ನು ಅನುಷ್ಟಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ವರೆಗೆ ಒಳ ಮೀಸಲಾತಿ ಜಾರಿಗೆ ಸಚಿವ ಮಹದೇವಪ್ಪ ಮೊದಲಾದವರು ಆಕ್ಷೇಪ ಎತ್ತುತ್ತಿದ್ದಾರೆ ಎಂದು ಹೇಳುತ್ತಿದದರು. ಎಸ್ಸಿ - ಎಸ್ಪಿ, ಟಿಎಸ್ಪಿ ಅನುದಾನದಲ್ಲೂ ಸಹ 6:6:5ರ ಅನುಪಾತದಲ್ಲಿ ಹಣ ಹಂಚಿಕೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ. 1 ರಷ್ಟು ಮೀಸಲಾತಿಯೊಂದಿಗೆ ಪ್ರತ್ಯೇಕ ನಿಗಮ ಹಾಗೂ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು. ಶಾಶ್ವತ ಆಯೊಗ ನೇಮಕ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ಒಳಮೀಸಲಾತಿ ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು ಎಂದರು.
ಆದಿ ಜಾಂಬವ ಅಭಿವೃದ್ಧಿ ನಿಗಮ, ಚರ್ಮ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಲಿಡ್ಕರ್), ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೆ ತಲಾ ಎರೆಡು ಸಾವಿರ ಕೋಟಿ ರೂ ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎ. ಈಶ್ವರಪ್ಪ, ಟಿ. ಪಂಪಾಪತಿ, ಕೆ. ವೆಂಕಟೇಶ್ ಮೂರ್ತಿ, ಇ. ರಾಜೇಶ್, ಚೇಳ್ಳಗುರ್ಕಿ ರಾಮಣ್ಣ, ಅರುಣಾಚಲಂ, ಹೆಚ್. ಮಾರೆಣ್ಣ, ವಿಶ್ವನಾಥಶರ್ಮ, ಪ್ರಸಾದ್, ಗಂಗಾಧರ ಇನ್ನಿತರರು ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್