

ಬಳ್ಳಾರಿ, 25 ಮಾರ್ಚ್ (ಹಿ.ಸ.)
ಆ್ಯಂಕರ್ : ಬಳ್ಳಾರಿ ಜಿಲ್ಲೆಯಾದ್ಯಂತ ಆಡಳಿತ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಹೆಚ್ಚಾಗಿದ್ದು, `ಭ್ರಷ್ಟಾಚಾರ ರಹಿತ, ಸುವರ್ಣ ಬಳ್ಳಾರಿ' ಬರೀ ಕಾಗದದಲ್ಲಿ ಉಳಿದಿದೆ ಎಂದು ಬಳ್ಳಾರಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ತಿಳಿಸಿದ್ದಾರೆ.
ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರದ ಯಾವುದೇ ಇಲಾಖೆಯ ಕಚೇರಿಗೆ ಸಾರ್ವಜನಿಕರು ಹೋದಲ್ಲಿ ಲಂಚವನ್ನು ಕಡ್ಡಾಯವಾಗಿ ಪಾವತಿಸಬೇಕಾಗಿದೆ. ಲಂಚ ಇಲ್ಲದೆಯೇ ಯಾವುದೇ ಕಚೇರಿಯಲ್ಲಿ ಕೆಲಸಗಳು ನಡೆಯುವುದಿಲ್ಲ. ಲಂಚ ನೀಡದೇ ಇದ್ದಲ್ಲಿ ಸಾರ್ವಜನಿಕರು ಕಚೇರಿ ಅಲೆದು, ಅಲೆದೂ ಸುಸ್ತಾಗಿ, ಚಪ್ಪಲಿ ಸವೆಸಿಕೊಳ್ಳಬೇಕು ಎಂದು ಅವರು ಆರೋಪಿಸಿದರು.
ಕೆಲ ಕಚೇರಿಗಳಲ್ಲಿ ಅಧಿಕಾರಿಗಳು, `ಹಣ ನೀಡದೇ ಇದ್ದರೆ ಕೆಲಸವೇ ಆಗುವುದಿಲ್ಲ' ಎಂದು ಹೇಳಿ, `ಈ ಹುದ್ದೆಗೆ ಬರಲು ನಾವು ಹಣ ಕೊಟ್ಟು ಬಂದಿದ್ದೇವೆ. ಕೊಟ್ಟ ಹಣವನ್ನು ದುಡಿಯಲು ಲಂಚ ಕೇಳುತ್ತೇವೆ. ದುಡ್ಡು ಕೊಡದೇ ಇದ್ದಲ್ಲಿ ಕೆಲಸ ಮಾಡಿಕೊಡುವುದಿಲ್ಲ' ಎಂದು ಹೇಳುತ್ತಿರುವುದು ಅತ್ಯಂತ ಸಾಮಾನ್ಯವಾಗಿದೆ. ಕಾರಣ ಬಳ್ಳಾರಿಯಲ್ಲಿ ಲಂಚಾವತಾರವೇ ಕುಣಿಯುತ್ತಿದೆ ಎಂದರು.
ಬಳ್ಳಾರಿಯಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ. ಗುತ್ತಿಗೆದಾರರು ಹಾಗೂ ಕೆಲ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಕೆಲ ಜನಪ್ರತಿನಿಧಿಗಳ ಏಜೆಂಟರು ಅಧಿಕಾರಿಗಳ ವರ್ಗಾವಣೆ, ಸರ್ಕಾರಿ ಆದೇಶಗಳ ಜಾರಿ ಇನ್ನಿತರೆಗಳನ್ನು ನಿರ್ಧರಿಸುವ ಹಂತದಲ್ಲಿದ್ದಾರೆ.
ಸಿಡಿಗಿನಮೊಳ ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದಿಂದ ಅಲೆದಾಡಿದರೂ ಯಾವುದೇ ಕ್ರಮವಾಗಿಲ್ಲ. ಪಿಡಿಒ ನುಶ್ರತ್ಭಾನು ಅವರು `ಮೇಲಧಿಕಾರಿಗಳು ಹೇಳಿದ್ದಾರೆ. ಎಕರೆಗೆ 50 ಸಾವಿರ ರೂಪಾಯಿ ನೀಡಿರಿ, ನಿಮ್ಮ ಕೆಲಸ ಆಗುತ್ತದೆ' ಎಂದು ಹೇಳುತ್ತಾರೆ. ಅಂದರೆ, ಮೇಲಧಿಕಾರಿಗಳು ಕೆಳ ಹಂತದ ಸಿಬ್ಬಂದಿಯಿಂದ ಲಂಚ ಸಂಗ್ರಹ ಮಾಡುತ್ತಿದ್ದಾರೆಯೇ, ಎಂದರು.
ಹೊನ್ನೂರು ಸ್ವಾಮಿ, ಯಲ್ಲನಗೌಡ, ರವಿಕುಮಾರ್, ಅಶೋಕ, ಜಮೀಲಾ, ಶಬಾನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್