ನಾಗಠಾಣದಲ್ಲಿ ಮೌನೇಶ್ವರರ ಅದ್ಧೂರಿ ಜಾತ್ರಾ ಮಹೋತ್ಸವ
ವಿಜಯಪುರ, 25 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಬುಧವಾರ ಜಗದ್ಗುರು ಶ್ರೀ ಮೌನೇಶ್ವರರ ಜಾತ್ರಾ ಮಹೋತ್ಸವವು ಸಡಗರ–ಸಂಭ್ರಮದಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಮೌನೇಶ್ವರರ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯಮೇಳದೊಂದಿಗೆ ಭಕ್ತಿ ಹಾಗೂ ಶ್ರದ್ಧೆ
ಜಾತ್ರೆ


ವಿಜಯಪುರ, 25 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಬುಧವಾರ ಜಗದ್ಗುರು ಶ್ರೀ ಮೌನೇಶ್ವರರ ಜಾತ್ರಾ ಮಹೋತ್ಸವವು ಸಡಗರ–ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಮೌನೇಶ್ವರರ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯಮೇಳದೊಂದಿಗೆ ಭಕ್ತಿ ಹಾಗೂ ಶ್ರದ್ಧೆಯಿಂದ ನೆರವೇರಿತು. ಪಲ್ಲಕ್ಕಿ ಭಕ್ತರ ಮನೆಗಳಿಗೆ ಭೇಟಿ ನೀಡಿ, ಅಲ್ಲಿ ಕಾಯಿ ನೈವೇದ್ಯ ಸ್ವೀಕರಿಸಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು.

ಈ ವೇಳೆ ಅಪಾರ ಭಕ್ತ ಸಮೂಹ ಹಾಗೂ ಆರತಿ ಹಿಡಿದ ಮಹಿಳೆಯರು ಭಕ್ತಿಭಾವದಿಂದ ಭಾಗವಹಿಸಿದ್ದರು. ದೇವರ ಪಲ್ಲಕ್ಕಿಯ ಮುಂದೆ ಬಿಜ್ಜರಗಿ, ಐರಸಂಗ, ಅಂಜುಟಗಿ, ತಾಂಬಾ, ಹೊನ್ನಳ್ಳಿ, ಜಂಬಗಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಪುರವಂತರು ತಮ್ಮ ವಿಶೇಷ ಪ್ರದರ್ಶನ ನೀಡಿದರು. ಬಳಿಕ ಮೌನೇಶ್ವರರ ಪಲ್ಲಕ್ಕಿ ಹಾಗೂ ಅನೇಕ ಭಕ್ತರು ಅಗ್ನಿ ಪ್ರವೇಶ ಮಾಡುವ ಮೂಲಕ ಭಕ್ತಿ ಮೆರೆದರು.

ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಹಾಬಲೇಶ್ವರ ಆಚಾರ್ಯರು ಹಾಗೂ ಶರಣಬಸು ಪೂಜೇರಿ ಅವರು ರಥೋತ್ಸವದ ಸಾನ್ನಿಧ್ಯ ವಹಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ನೆರೆದ ಭಕ್ತರು ರಥದ ಮೇಲೆ ಹೂವು, ಬಾಳೆಹಣ್ಣು ಹಾಗೂ ಉತ್ತತ್ತಿ ಸಮರ್ಪಿಸಿ ಭಕ್ತಿ ಪ್ರದರ್ಶಿಸಿದರು. ಭಕ್ತರು ಜಯಘೋಷಗಳ ನಡುವೆ ರಥವನ್ನು ಎಳೆಯುವ ದೃಶ್ಯ ಮನಮೋಹಕವಾಗಿತ್ತು. ಈ ವೇಳೆ ಭಕ್ತರು ‘ಏಕ ಲಾಕ್ ಐಂಸಿ ಹಜಾರ್, ಪಾಚೋಪೀರ ಪೈಗಂಬರ್ ಜೀತಾ, ಪೈಗಂಬರ್ ಮೌನೋದ್ದೀನ್, ಕಾಶೀಪತಿ ಗಂಗಾಧರ, ಹರಹರ ಮಹಾದೇವ’ ಎಂಬ ಜೈಕಾರಗಳನ್ನು ಮೊಳಗಿಸಿದರು.

ಈ ಸಂದರ್ಭದಲ್ಲಿ ಶ್ರೀಧರ ಬಡಿಗೇರ, ಕಲ್ಯಾಣಿ ಪತ್ತಾರ, ಸುಭಾಷ ಪತ್ತಾರ, ಸಂತೋಷ ಸಿಂದಗಿ, ಅರುಣ ಬಡಿಗೇರ, ರಾಜು ಪತ್ತಾರ, ಕಿರಣ ಬಡಿಗೇರ, ಶ್ರೀಶೈಲ ಪತ್ತಾರ, ಅಶೋಕ ಬಡಿಗೇರ, ವಿಶ್ವನಾಥ ಬಡಿಗೇರ, ರಮೇಶ ಬಡಿಗೇರ, ಮೌನೇಶ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande