
ಕೊಪ್ಪಳ, 25 ಮಾರ್ಚ್ (ಹಿ.ಸ.)
ಆ್ಯಂಕರ್ : ನಗರಸಭೆ ಆವರಣದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ 146ನೇ ದಿನದ ಧರಣಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸದನದಲ್ಲಿ ಧ್ವನಿ ಎತ್ತಿ 22 ಹಳ್ಳಿಗಳ ಜನರನ್ನು 13 ಸ್ಪಾಂಜ್ ಐರನ್ ಮಾಲಿನ್ಯಕಾರಿ ಕಾರ್ಖಾನೆಗಳಿಂದ ಕಾಪಾಡುವಂತೆ ಸರ್ಕಾರದ ಗಮನ ಸೆಳೆದು ಕಾರ್ಖಾನೆ ಸ್ಥಳಾಂತರ ಮಾಡಬೇಕು ಇಲ್ಲವೇ ಈ ಹಳ್ಳಿಯ ಜನರನ್ನು ಸ್ಥಳಾಂತರ ಮಾಡಬೇಕಾಗುತ್ತದೆ ಅಷ್ಟು ಪರಿಸ್ಥಿತಿ ಗಂಭೀರವಾಗಿದೆ ಎಂದು ಇಲ್ಲಿನ ನೈಜ ಚಿತ್ರಣ ಬಿಚ್ಚಿಟ್ಟಿದ್ದಕ್ಕೆ ಜಂಟಿ ಕ್ರಿಯಾ ವೇದಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.
ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು 22 ಹಳ್ಳಿಯ ಐವತ್ತು ಸಾವಿರ ಜನರ, ಕೊಪ್ಪಳ ಭಾಗ್ಯನಗರದ ಒಂದೂವರೆ ಲಕ್ಷ ಜನರ ಜೀವ ಆರೋಗ್ಯ ಉಳಿಸಿಕೊಳ್ಳಲು ಹೋರಾಡುತ್ತಿರುವ ಸಂದರ್ಭದಲ್ಲಿ ಚಳವಳಿಯ ಕೂಗು ಸದನಕ್ಕೆ ತಲುಪಿಸಿ ಸಚಿವರಾದ ಶರಣಪ್ರಕಾಶ ಪಾಟೀಲ್, ಎಂ. ಬಿ. ಪಾಟೀಲ್ ಅವರಿಂದ ಉತ್ತರ ಪಡೆಯಲು ಪ್ರಯತ್ನ ಮಾಡಿದ್ದು ಸ್ವಾಗತ, ಆದರೆ ಇದರಲ್ಲಿ ಇನ್ನೂ ಕಠಿಣ ನಿಲುವು ತಳೆದು ಈ ಬಾಧಿತರ ಪರವಾಗಿ ನಿಂತು ಕಾರ್ಖಾನೆಗಳನ್ನು ಸ್ಥಳಾಂತರ ಮಾಡಲೇಬೇಕು. ಯಾಕೆಂದರೆ ಎರಡು ದಶಕಗಳಿಂದ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳದ ಕಾರ್ಖಾನೆಗಳು ಈಗ ಅಳವಡಿಸಿಕೊಳ್ಳಲು ಸಾಧ್ಯವೂ ಇಲ್ಲ, ವಾಸ್ತವದಲ್ಲಿ ಅಂತಹ ಟೆಕ್ನಾಲಜಿಯೇ ಇಲ್ಲ. ಕಾರ್ಖಾನೆಗಳು ಮತ್ತೆ ಕಣ್ಣಾ ಮುಚ್ಚಾಲೆ ಆಟ ಆಡಿ ಹಳ್ಳಿ ಜನರ ಜೀವ ತೆಗೆಯುತ್ತವೆ ಎಂದರು.
ಮಹಿಳಾ ಧುರೀಣೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಬಲ್ದೋಟ ನಗರಕ್ಕೆ ಹೊಂದಿಕೊಂಡಿದ್ದು ಇದರ ಒಂದು ಚಿಮಣಿ 40ರಷ್ಟು ನಗರದ ಮಾಲಿನ್ಯ ಮಾಡುತ್ತಿದೆ. ಈ ಘಟಕ ಬಂದ್ ಮಾಡಬೇಕು. ಇಲ್ಲದಿದ್ದರೆ ನಗರದ ಲಕ್ಷಗಟ್ಟಲೆ ಜನರು ಬೀದಿಗಿಳಿಯುತ್ತಾರೆ ಜನಪರ ಸರಕಾರ ರೈತರ ಧ್ವನಿಯಾಗಬೇಕು, ಎಂ. ಬಿ. ಪಾಟೀಲರು ಬೇಕಾದರೆ ಕಾರ್ಖಾನೆಯನ್ನು ತಮ್ಮೂರಲ್ಲಿ ಹಾಕಿಕೊಳ್ಳಲಿ, ನಮಗೆ ಬೇಡ ಎಂದರೆ ಬೇಡ, ಒತ್ತಾಯ ಮಾಡಲು ಸರಕಾರಕ್ಕೆ ಅವಕಾಶ ಇಲ್ಲ, ಇದು ಪ್ರಜಾಪ್ರಭುತ್ವ, ಮಹಾರಾಜರ ರೀತಿ ಇಲ್ಲಿ ನಡೆಯದು, ಹಠಕ್ಕೆ ಬಿದ್ದರೆ ಕಾರ್ಖಾನೆಯೇ ಇಲ್ಲದಂತೆ ಮಾಡಲು ಜನ ಭಗತ್ ಸಿಂಗ್ ಆಗಿಯೇ ತೀರುತ್ತಾರೆ ಎಚ್ಚರ ಎಂದರು. ಇದೇ ವಿಷಯಕ್ಕೆ ಸಂಬಂಧಿಸಿ ಸಂಚಾಲಕ ಮಲ್ಲಿಕಾರ್ಜುನ ಗೋನಾಳ ಮಾತನಾಡಿ, ಬಿಜೆಪಿ ಮುಖ್ಯ ಸಚೇತಕರು, ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಸದನದಲ್ಲಿ ಚರ್ಚೆಗಿಳಿದು ಕಾರ್ಖಾನೆಗಳು ಮಾಲಿನ್ಯ ನಿಯಂತ್ರಣ ಮಾಡುವ ತಂತ್ರಜ್ಞಾನ ಅಳವಡಿಸಿಕೊಳ್ಳಲಿ ಇಲ್ಲವೇ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಹೇಳಿದ್ದು ಬಾಧಿತ ಹಳ್ಳಿ ಜನರಿಗೆ ನಿರಾಸೆ ಮೂಡಿಸಿದೆ. ಸರ್ಕಾರ ಹಳ್ಳಿಗಳ ಸ್ಥಳಾಂತರ ಮಾಡಲು ಸಾಧ್ಯವೇ? ಎನ್ನುವುದನ್ನು ಚೆನ್ನಾಗಿ ವಿವೇಚನೆ ಮಾಡಿ ಹೇಳಬೇಕಿತ್ತು. ಈ ವಿಷಯದಲ್ಲಿ ಕಾರ್ಖಾನೆ ವಿಚಾರದಲ್ಲಿ ಮೃದು ಧೋರಣೆ ತಾಳಬಾರದು. ವಿರೋಧ ಪಕ್ಷ ಆಳುವ ಪಕ್ಷಕ್ಕಿಂತ ಗಟ್ಟಿಯಾದ ನಿಲುವು ತಳೆದು ಸದನದಲ್ಲಿ ಮತ್ತು ಮೈದಾನದಲ್ಲಿ ಹೋರಾಡಬೇಕು ಎಂದರು.
ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಡಬಾಳ,
ಮಹಿಳಾ ನಾಯಕಿಯರಾದ ಕಾವ್ಯ ಗಡಾದ, ವಿದ್ಯಾ ನಾಲ್ವಾಡ, ರತ್ನಮ್ಮ ದೊಡ್ಡಮನಿ, ಮುಖಂಡರುಗಳಾದ ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಡಾ. ಬಸವರಾಜ ಪೂಜಾರ, ಶರಣು ಶೆಟ್ಟರ್, ಸುಭಾನ್ ಸಾಬ್ ನೀರಲಗಿ, ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ಶ್ರೀನಿವಾಸ ಪಂಡಿತ್, ಗಂಗಾಧರ ಖಾನಾಪೂರ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಹಾದೇವಪ್ಪ ಮಾವಿನಮಡು, ರಾಜಶೇಖರ ಏಳುಭಾವಿ, ವೈ. ಸತ್ಯನಾರಾಯಣ, ಪಂಪಣ್ಣ ಚಿಂತಪಲ್ಲಿ, ನಾಗರಾಜ ಕುಷ್ಟಗಿ ಲಾಚನಕೇರಿ, ಕೆ.ಎಸ್. ಮುದ್ದಾಬಳ್ಳಿ, ಸಿ.ಕೊಟ್ರೇಶಪ್ಪ, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ರೇವಣಸಿದ್ದಪ್ಪ ಚಿತ್ರಗಾರ, ಭೀಮಪ್ಪ ಯಲಬುರ್ಗಿ, ಎಂ.ಕೆ.ಎನ್.ರೆಡ್ಡಿ ಬಸಾಪುರ, ಕನಕಪ್ಪ ಇನ್ನಿತರರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್