ಕೆಜಿಐಎಸ್ 2.0 ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯಕ
ವಿಜಯಪುರ, 25 ಮಾರ್ಚ್ (ಹಿ.ಸ.) ಆ್ಯಂಕರ್ : ಕೆಜಿಐಎಸ್ 2.0 ವ್ಯವಸ್ಥೆಯ ಬಳಕೆ ಹಾಗೂ ಅನುಷ್ಠಾನ ಕುರಿತು ಕಾರ್ಯಾಗಾರಗಳ ಮೂಲಕ ವಿವಿಧ ಮಟ್ಟಗಳಲ್ಲಿ ಸಮನ್ವಯವನ್ನು ಬಲಪಡಿಸಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಕೆಎಸ್ಆರ್ಎಸ್ಎಸಿ ಹಾಗೂ ಡಿಪಿಎಆರ್ ನಿರ್ದೇಶ
ಸಭೆ


ವಿಜಯಪುರ, 25 ಮಾರ್ಚ್ (ಹಿ.ಸ.)

ಆ್ಯಂಕರ್ : ಕೆಜಿಐಎಸ್ 2.0 ವ್ಯವಸ್ಥೆಯ ಬಳಕೆ ಹಾಗೂ ಅನುಷ್ಠಾನ ಕುರಿತು ಕಾರ್ಯಾಗಾರಗಳ ಮೂಲಕ ವಿವಿಧ ಮಟ್ಟಗಳಲ್ಲಿ ಸಮನ್ವಯವನ್ನು ಬಲಪಡಿಸಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಕೆಎಸ್ಆರ್ಎಸ್ಎಸಿ ಹಾಗೂ ಡಿಪಿಎಆರ್ ನಿರ್ದೇಶಕ ರಾಜೇಶ ಎನ್.ಎಲ್. ಹೇಳಿದರು.

ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೆಜಿಐಎಸ್ 2.0 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಯೋಜನೆ ಯಶಸ್ವಿಯಾಗಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯತೆ ಅತ್ಯಂತ ಮುಖ್ಯವಾಗಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರ ನೀಡಬೇಕು ಎಂದು ತಿಳಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇ-ಆಡಳಿತ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಅದರ ಆವೃತ್ತಿ 2.0 ಅನ್ನು ಯಶಸ್ವಿಯಾಗಿ ಜಾರಿಗೆ ತರುವುದಕ್ಕಾಗಿ ಎಲ್ಲಾ ಇಲಾಖೆಗಳ ಸಹಭಾಗಿತ್ವ ಅಗತ್ಯವಾಗಿದೆ ಎಂದರು.

ಈ ಯೋಜನೆ ಜಿಐಎಸ್ ಆಧಾರಿತ ನೈಜ-ಸಮಯದ ದತ್ತಾಂಶ, ಆಧುನಿಕ ವಿಶ್ಲೇಷಣೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿದ್ದು, ನಾಗರಿಕರು ಹಾಗೂ ಇಲಾಖಾ ಅಧಿಕಾರಿಗಳು ಭೌಗೋಳಿಕ ಮಾಹಿತಿಯೊಂದಿಗೆ ಸುಲಭವಾಗಿ ವ್ಯವಹರಿಸಲು ಹಾಗೂ ಎನ್ಒಸಿ ನೀಡಲು, ಸುಧಾರಿತ ಡಿಎಸ್ಎಸ್ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಸ್ಥಳೀಯ ಸಮಸ್ಯೆಗಳಿಗೆ ಜಿಐಎಸ್ ಮೂಲಕ ತಾಂತ್ರಿಕ ಪರಿಹಾರ ಒದಗಿಸಲು ಜಿಲ್ಲಾ ಮಟ್ಟದ ಇಲಾಖೆಗಳು ಅಗತ್ಯವಾದ ಜಿಐಎಸ್ ತಂತ್ರಾಂಶ ಮತ್ತು ದತ್ತಾಂಶಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.

ಏಪ್ರಿಲ್ 2 ರಂದು ಚಾಮರಾಜನಗರದಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆಜಿಐಎಸ್ ಕುರಿತು ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಇದರಿಂದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿದೆ ಎಂದು ಹೇಳಿದರು.

ಪ್ರಸ್ತುತ ಕೆಜಿಐಎಸ್ ವ್ಯವಸ್ಥೆಯಲ್ಲಿ ಒಟ್ಟು 251 ಅಪ್ಲಿಕೇಶನ್ಗಳು ಇದ್ದು, ಅವುಗಳಲ್ಲಿ 101 ಅಪ್ಲಿಕೇಶನ್ಗಳು ಚಾಲ್ತಿಯಲ್ಲಿವೆ. ಅದರಲ್ಲಿ 41 ಮೊಬೈಲ್ ಅಪ್ಲಿಕೇಶನ್ಗಳು ಹಾಗೂ 61 ವೆಬ್ ಆಧಾರಿತ ಅಪ್ಲಿಕೇಶನ್ಗಳನ್ನು ಬಳಸಬಹುದು ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಮಾತನಾಡಿ, ಕೆಜಿಐಎಸ್ 2.0 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿಯೊಬ್ಬರೂ ಇದರ ಬಗ್ಗೆ ಸಮಗ್ರ ಮಾಹಿತಿ ಹೊಂದಬೇಕು. ಈ ಯೋಜನೆ ಆಡಳಿತ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಡಾ. ರಾಜಕುಮಾರ ಕತ್ರಿ ಅವರು ವಿಡಿಯೋ ಸಂವಾದದ ಮೂಲಕ ಮಾತನಾಡಿ, ಈ ತಂತ್ರಾಂಶ ಬಳಕೆಯಿಂದ ತ್ವರಿತ ಹಾಗೂ ಸುಲಭ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗುತ್ತದೆ. ಇಂತಹ ಮಹತ್ವದ ಯೋಜನೆ ಜಾರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಶೇಷ ಆಸಕ್ತಿ ತೋರಿದ್ದು, ಯಶಸ್ವಿ ಅನುಷ್ಠಾನಕ್ಕೆ ಮುತುವರ್ಜಿ ವಹಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಕೆಜಿಐಎಸ್-2 ವ್ಯವಸ್ಥೆಯ ಸದ್ಬಳಕೆಗಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ತಂತ್ರಜ್ಞಾನ ಯುಗದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ತ್ವರಿತವಾಗಿ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಚೆಕ್ ಡ್ಯಾಂ, ಗ್ರಾಮ ಪಂಚಾಯಿತಿ ಆಸ್ತಿ ಮಾಹಿತಿ, ಅಂಗನವಾಡಿ ಕೇಂದ್ರ ಸೇರಿದಂತೆ ವಿವಿಧ ಮಾಹಿತಿಗಳನ್ನು ಈ ತಂತ್ರಾಂಶದ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಸ್ವಾಗತಿಸಿದರು. ಕ್ರೀಡಾಧಿಕಾರಿ ರಾಜಶೇಖರ ದೈವಾಡಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande