ವೈದ್ಯಕೀಯ ಕಾಲೇಜು ಆರಂಭಿಸಲು ಡಿಪಿಆರ್ ತಯಾರಿಗೆ ಸೂಚನೆ: ಕೊತ್ತೂರು ಮಂಜುನಾಥ್
ವೈದ್ಯಕೀಯ ಕಾಲೇಜು ಆರಂಭಿಸಲು ಡಿಪಿಆರ್ ತಯಾರಿಗೆ ಸೂಚನೆ: ಕೊತ್ತೂರು ಮಂಜುನಾಥ್
ಕೋಲಾರ ಅರಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಚುನಾವಣೆಗೆ ಶಾಸಕ ಕೊತ್ತೂರು ಮಂಜುನಾಥ್ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ನಡೆಸಿದರು.


ಕೋಲಾರ, ೨೫ ಮಾರ್ಚ್ (ಹಿ.ಸ):

ಆ್ಯಂಕರ್ : ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಲೋಕೋಪಯೋಗಿ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ನಗರದಲ್ಲಿ ಬುಧವಾರ ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಪಿಆರ್ಗೆ ಅಂದಾಜು ವೆಚ್ಚ ಸಿದ್ಧವಾಗುತ್ತಿದ್ದು, ಅದನ್ನು ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸ್ಯಾನಿಟೋರಿಯಂ ಜಾಗ ಸೇರಿದಂತೆ ಎರಡು ಕಡೆ ಸ್ಥಳ ಪರಿಶೀಲಿಸಿದ್ದೇವೆ. ಸದ್ಯದಲ್ಲೇ ಸೂಕ್ತ ಜಾಗ ಅಂತಿಮಗೊಳಿಸಲಾಗುವುದು ಎಂದರು.

ಕೋಲಾರ ನಗರದ ರಿಂಗ್ ರಸ್ತೆಗೆ ಡಿಪಿಆರ್ ಆಗಿದೆ. ಹೊಸ ಎಪಿಎಂಸಿ ಮಾರುಕಟ್ಟೆಗೆ ೬೩ ಎಕರೆ ಜಾಗಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಇನ್ನು ೪೦ ಎಕರೆ ಜಾಗ ಕೊಡಲು ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೂ ಸದ್ಯದಲ್ಲೇ ಒಪ್ಪಿಗೆ ಸಿಗಲಿದೆ. ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರು ೧೭ ಎಕರೆ ಜಾಗವನ್ನು ಗಿಡ ಬೆಳೆಸಲು ಅರಣ್ಯ ಇಲಾಖೆಗೆ ನೀಡಿದ್ದರು. ಅಗತ್ಯವಿದ್ದಾಗ ವಾಪಸ್ ಪಡೆಯುವ ಷರತ್ತು ಕೂಡ ವಿಧಿಸಿದ್ದರು. ಹೀಗಾಗಿ, ಆ ಜಾಗ ಪಡೆದು ಅರಣ್ಯ ಇಲಾಖೆಗೆ ಬೇರೆ ಜಾಗ ಕೊಡುತ್ತೇವೆ. ಈವರೆಗೆ ಯಾರ ಕೈಯಲ್ಲೂ ಎಪಿಎಂಸಿಗೆ ಜಾಗ ಕೊಡಿಸುವ ಕೆಲಸ ನಡೆದಿರಲಿಲ್ಲ. ಈಗ ನಮ್ಮ ಅವಧಿಯಲ್ಲಿ ಜಾಗ ಕೊಡುತ್ತಿದ್ದೇವೆ ಎಂದರು.

ಕೋಲಾರ ನಗರ ಹಾಗೂ ತಾಲ್ಲೂಕಿನಲ್ಲಿ ನಾವೇನು ಕೆಲಸ ಮಾಡುತ್ತಿದ್ದೇವೆ ಎಂದು ನಾವು ಹೇಳುವುದಿಕ್ಕಿಂತ ಜನರೇ ಮಾತನಾಡುತ್ತಿದ್ದಾರೆ. ವೈದ್ಯಕೀಯ ಕಾಲೇಜು, ರಿಂಗ್ ರಸ್ತೆ, ಎಪಿಎಂಸಿಗೆ ಜಾಗದ ಬಗ್ಗೆ ಆದ್ಯತೆ ನೀಡಿದ್ದೇವೆ. ಆರೋಗ್ಯ ಭಾಗ್ಯ, ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, ಎರಡೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಹಿಂದೆಯೂ ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಚುನಾವಣೆ ಎಂದ ಮೇಲೆ ಗೊಂದಲ, ಜಗಳ ಸಹಜ ಎಂದು ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲೂರಿಗೆ ಏಪ್ರಿಲ್ ೧ಕ್ಕೆ ಬರಬೇಕಿತ್ತು. ಅದನ್ನು ಮುಂದೂಡಲಾಗಿದ್ದು, ಏ.೧೫ರ ನಂತರ ಭೇಟಿ ನೀಡಲಿದ್ದಾರೆ. ಕೋಲಾರಕ್ಕೂ ನಂತರದ ದಿನಗಳಲ್ಲಿ ಬರಲಿದ್ದಾರೆ. ದೇವನಹಳ್ಳಿ, ವೇಮಗಲ್, ನರಸಾಪುರ, ಮಾಲೂರು, ಹೊಸೂರು ಹೆದ್ದಾರಿ ರಸ್ತೆಗೂ ಆಗ ಚಾಲನೆ ನೀಡಲಿದ್ದಾರೆ. ಈಗಾಗಲೇ ನಾಲ್ಕು ಪಥಗಳ ಈ ರಸ್ತೆಗೆ ಟೆಂಡರ್ ಆಗಿದ್ದು, ೧೫೦ ಎಂಜಿನಿಯರ್ಗಳು ಸಮೀಕ್ಷೆಯಲ್ಲಿ ತೊಡಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದಷ್ಟೇ ಕೆ.ಸಿ.ವ್ಯಾಲಿ ಯೋಜನೆಯ ಉದ್ದೇಶವಾಗಿದೆ. ಹಿಂದೆ ನಮ್ಮಲ್ಲಿ ೨ ಸಾವಿರ ಅಡಿ ಕೊಳವೆ ಬಾವಿ ತೋಡಿದರೂ ನೀರು ಬರುತ್ತಿರಲಿಲ್ಲ. ಹೀಗಾಗಿ, ಎರಡನೇ ಹಂತದ ಶುದ್ಧೀಕರಣ ಮಾಡಿ ನೀರು ತಂದೆವು ಎಂದು ಹೇಳಿದರು.

ಅರಹಳ್ಳಿ ವಿವಿಧೋದ್ದೇಶದ ಪ್ರಾಥಮಿಕ ಕೃಷಿ ಗ್ರಾಮೀಣ ಸಂಘದ ಚುನಾವಣೆ ಇದೆ. ಕಾಂಗ್ರೆಸ್ ಬೆಂಬಲಿತ ೧೨ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಎಲ್ಲರೂ ಸೊಸೈಟಿ ನಿರ್ದೇಶಕರಾಗಲು ಅರ್ಹರಿದ್ದು, ಕೆಲಸ ಮಾಡುವಂಥವರು. ಇವರಿಗೆ ಷೇರುದಾರರು ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಹಾಗೂ ಜೆಡಿಎಸ್ನವರು ಕೂಡ ದೇವರ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆಗೆ, ಬಿಜೆಪಿ–ಜೆಡಿಎಸ್ನವರು ದೇವರ ಮೊರೆ ಹೋಗಿರುವುದು ಸಂತೋಷದ ವಿಚಾರ. ಆದರೆ, ದೇವರು ಷೇರುದಾರರಿಗೆ ಆಶೀರ್ವಾದ ಮಾಡಲಿದ್ದು, ಅವರು ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಹಾಫ್ ಕಾಮ್ಸ್ ಮಾಜಿ ಅಧ್ಯಕ್ಷ ಅರಹಳ್ಳಿ ಗೋಪಾಲಕೃಷ್ಣ, ಸೊಸೈಟಿ ಹಾಲಿ ಅಧ್ಯಕ್ಷ ಶ್ರೀನಿವಾಸ್, ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಕಿಲಾರಿಪೇಟೆ ಮಣಿ, ಗಂಗಣ್ಣ, ಅಮರನಾಥ್, ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯನಗರ ಮಂಜುನಾಥ್ ಸೇರಿದಂತೆ ಅಭ್ಯರ್ಥಿಗಳು ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande