


ಬಳ್ಳಾರಿ, 25 ಮಾರ್ಚ್ (ಹಿ.ಸ.)
ಆ್ಯಂಕರ್ : ಗ್ರಾಹಕರು ತಮಗಿರುವ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿದಾಗ ಮಾತ್ರ ಸದೃಢ ದೇಶದ ಪ್ರಗತಿಯ ಹಾದಿ ಕಾಣಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ‘ಸುರಕ್ಷಿತ ಉತ್ಪನ್ನಗಳು ಆತ್ಮ ವಿಶ್ವಾಸದ ಗ್ರಾಹಕರು’ ಎಂಬ ಘೋಷವಾಕ್ಯದಡಿ ನಗರದ ಕೋಟೆ ಮುಖ್ಯ ರಸ್ತೆಯ ಮೇದಾ ಪದವಿ ಪೂರ್ವ ವಿದ್ಯಾಲಯದ ಮೇದಾ ಆಡಿಟೋರಿಯಮ್ ಹಾಲ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ‘ಖರೀದಿದಾರರೇ ಎಚ್ಚರ' ಎಂಬ ನಿಯಮವಿತ್ತು. ಆದರೆ ಇಂದು ಕಾಲ ಬದಲಾಗಿದ್ದು, ‘ಮಾರಾಟಗಾರರೇ ಎಚ್ಚರ' ಎಂಬ ಸಿದ್ಧಾಂತ ಜಾರಿಯಲ್ಲಿದೆ. ಗ್ರಾಹಕರಿಗೆ ತಾವು ಪಡೆಯುವ ವಸ್ತು ಅಥವಾ ಸೇವೆಯಲ್ಲಿ ಯಾವುದೇ ಲೋಪ ಕಂಡುಬAದಲ್ಲಿ ಅದನ್ನು ಪ್ರಶ್ನಿಸುವ ಮತ್ತು ಪರಿಹಾರ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಹೆಚ್ಚಾಗುತ್ತಿದ್ದು, ಇ-ಕಾಮರ್ಸ್ ಸಂಸ್ಥೆಗಳ ಮೂಲಕ ನಡೆಯುವ ವಂಚನೆಗಳ ಬಗ್ಗೆಯೂ ಪ್ರತಿಯೊಬ್ಬರೂ ತಿಳುವಳಿಕೆ ಹೊಂದಬೇಕು. ಗ್ರಾಹಕರು ತಮ್ಮ ದೈನಂದಿನ ಜೀವನದಲ್ಲಿ ಗ್ರಾಹಕ ಹಕ್ಕುಗಳನ್ನು ಚಲಾಯಿಸಬೇಕು. ಯಾವುದೇ ವಸ್ತುವಿನ ಗುಣಮಟ್ಟದಲ್ಲಿ ಕೊರತೆ ಇದ್ದರೆ ಅಥವಾ ಸೇವೆಯಲ್ಲಿ ವ್ಯತ್ಯಯವಾದರೆ ಗ್ರಾಹಕರು ನೇರವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಬಹುದು ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ.ಎನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಹಣ ಪಾವತಿಸಿ ಸೇವೆ ಅಥವಾ ವಸ್ತುವನ್ನು ಪಡೆಯುವ ವ್ಯಕ್ತಿಯೂ ಗ್ರಾಹಕನೇ. ನಾವು ಜಾಗೃತರಾದಾಗ ಮಾತ್ರ ಮೋಸವನ್ನು ತಡೆಯಲು ಸಾಧ್ಯ. ಗ್ರಾಹಕರಿಗೆ ಆಗುವ ಅನ್ಯಾಯ, ಮೋಸ ಅಥವಾ ಗುಣಮಟ್ಟದ ಸೇವೆಯಲ್ಲಿನ ಲೋಪಗಳ ವಿರುದ್ಧ ಧ್ವನಿ ಎತ್ತಲು ಪ್ರತಿ ಜಿಲ್ಲೆಯಲ್ಲೂ ಗ್ರಾಹಕ ವೇದಿಕೆ ಅಥವಾ ಆಯೋಗಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
1962 ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ಮೊದಲ ಬಾರಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದರು. ಭಾರತದಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆಯನ್ನು 1986 ರಲ್ಲಿ ಜಾರಿಗೆ ತರಲಾಯಿತು. ಹಾಗಾಗಿ ಪ್ರತಿವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ರಕ್ಷಣೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಪರಿಹಾರ ಪಡೆಯುವ ಹಕ್ಕು, ಗ್ರಾಹಕ ಶಿಕ್ಷಣದ ಹಕ್ಕು ಸೇರಿದಂತೆ ಈ ಆರು ಹಕ್ಕುಗಳು ಗ್ರಾಹಕರಿಗೆ ಸಂವಿಧಾನಾತ್ಮಕವಾಗಿ ಒದಗಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ವಕೀಲ ಅಂಕಲಯ್ಯ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ತಾವು ಬಳಸುವ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಅತ್ಯಗತ್ಯವಾಗಿದೆ ಎಂದರು.
ಇನ್ನೋರ್ವ ಹಿರಿಯ ವಕೀಲ ಎನ್.ಪ್ರಕಾಶ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ಗ್ರಾಹಕನೇ ಅಧಿಪತಿ. ಯಾವುದೇ ವಸ್ತುವನ್ನು ಖರೀದಿ ಮಾಡುವಾಗ ಅದರ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನಿಸುವ ಹಕ್ಕು ಗ್ರಾಹಕನಿಗಿದೆ. ವಸ್ತುಗಳನ್ನು ಖರೀದಿಸುವಾಗ ಉತ್ಪಾದನಾ ದಿನಾಂಕ, ಮುಕ್ತಾಯದ ದಿನಾಂಕ, ವಾರಂಟಿ ಮತ್ತು ಗ್ಯಾರಂಟಿ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಗ್ರಾಹಕರಿಗೆ ಮೋಸವಾದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಬಹುದು. ಇಲ್ಲಿ ಆರು ತಿಂಗಳ ಒಳಗಾಗಿ ಪ್ರಕರಣಗಳ ವಿಲೇವಾರಿ ಮಾಡಲಾಗುತ್ತದೆ ಎಂದು ವಿವರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ದೇವರಾಜ್ ಕೆ.ಆರ್., ಶ್ರೀ ಮೇದಾ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥ ಖುಷ್ವಂತ್, ಕಾನೂನು ಮಾಪನ ಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕ ಮನೋಜ್ ಕುಮಾರ್ ಸೇರಿದಂತೆ ಅಧಿಕಾರಿ- ಸಿಬ್ಬಂದಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ನ್ಯಾಯಬೆಲೆ ಅಂಗಡಿ ವಿತರಕರು, ಗ್ಯಾಸ್ ವಿತರಕ ಏಜೆನ್ಸಿದಾರರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್