
ಹುಬ್ಬಳ್ಳಿ, 25 ಮಾರ್ಚ್ (ಹಿ.ಸ.):
ಆ್ಯಂಕರ್:
ಹುಬ್ಬಳ್ಳಿ ಉಣಕಲ್ಲಿನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್. ಅವರು ಭೇಟಿ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಣಕಲ್ಲಿನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನವು ಭಾರತೀಯ ಪುರಾತತ್ವ ಇಲಾಖೆ ಅಧೀನಕ್ಕೆ ಬರುತ್ತದೆ. ದೇವಸ್ಥಾನದ ಸುತ್ತಲೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಭೂ ಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಇಂದು ಭೇಟಿ ನೀಡಿದ್ದೇನೆ. ಅಲ್ಲದೇ ಉಣಕಲ್ ಕೆರೆ, ತೋಳನಕೆರೆ, ಜಯದೇವ ಆಸ್ಪತ್ರೆ ಹಾಗೂ ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಭೇಟಿ ನೀಡಲಾಗಿದೆ. ಮುಂದೆ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಅಲ್ಲದೇ ಅಧಿಕಾರಿಗಳಿಗೆ ಬೇಕಾದ ಸಹಾಯ, ಸಹಕಾರ ಹಾಗೂ ಸಲಹೆ ಸೂಚನೆಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಅಲ್ಲದೇ ಈಗಾಗಲೇ ಎನ್‌ಒಸಿ ಕೂಡ ದೊರೆತಿದೆ. ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ದೇವಸ್ಥಾನದ ಸುತ್ತಲಿನ ಸುಮಾರು 33 ಮನೆಗಳನ್ನು ತೆರವುಗೊಳಿಸಲಾಗುವುದು. ಭಾರತೀಯ ಪುರಾತತ್ವ ಇಲಾಖೆಯು ಈ ದೇವಸ್ಥಾನವನ್ನು ಸ್ಮಾರಕವೆಂದು ಗುರುತಿಸಿದೆ. ಆ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲೂ ಯಾವುದೇ ಮನೆಗಳನ್ನು ಇರಬಾರದು ಎಂದು ಪುರಾತತ್ವ ಇಲಾಖೆಯ ನಿಯಮಾವಳಿಗಳು ಸೂಚಿಸುತ್ತವೆ. ಸುಮಾರು 33 ಮನೆಗಳ ಮಾಲೀಕರಿಗೆ ಪರಿಹಾರಧನವನ್ನು ಒದಗಿಸಲಾಗುವುದು ಎಂದರು.
ದೇವಸ್ಥಾನವು 1,271 ಚ.ಮೀ. ವಿಸ್ತೀರ್ಣವನ್ನು ಹೊಂದಿದೆ. ಸುಮಾರು 3,901 ಚ.ಮೀ. ಪ್ರದೇಶವನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಅಂದರೆ ಒಂದು ಎಕರೆಗೆ ಒಂದುವರೆ ಗುಂಟೆ ಜಾಗ ಕಡಿಮೆಯಿದೆ. ಭೂ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಸುಮಾರು ರೂ.9 ಕೋಟಿ ನೀಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹಂತದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ, ಪಾಲಿಕೆಯ ಸಹಾಯಕ ಆಯುಕ್ತರಾದ ವಿಜಯಕುಮಾರ್, ಹುಬ್ಬಳ್ಳಿ ಶಹರ ತಹಶೀಲ್ದಾರ ಮಹೇಶ ಭಗವಂತ ಗಸ್ತೆ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa