
ಬಾಗಲಕೋಟೆ, 25 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರಚಾರ ಚಟುವಟಿಕೆಗಳು ಜೋರಾಗಿ ಸಾಗುತ್ತಿವೆ. ಈ ನಡುವೆ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಅವರ ಸಹೋದರಿ ಬಾಯಕ್ಕ ಇಂದು ಪ್ರಚಾರ ನಡೆಸಿದರು.
ಪ್ರಚಾರದ ವೇಳೆ ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಯಕ್ಕ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಹೆಚ್.ವೈ. ಮೇಟಿ ಅವರ ಋಣ ನನ್ನ ಮೇಲೆ ಇದೆ. ಹಾಗಾಗಿ ಅವರ ಮಗ ಉಮೇಶ್ ಅವರನ್ನು ಗೆಲ್ಲಿಸಿಯೇ ಗೆಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.
ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತದಾರರು ಒಲವು ತೋರುತ್ತಿದ್ದಾರೆ ಎಂದು ಬಾಯಕ್ಕೆ ಹೇಳಿದರು.
ಶ್ರೀರಾಮ ಪ್ರಭುಗಳಿಗೆ ಹೇಗೆ ಆಂಜನೇಯ ಬೆಂಬಲವಾಗಿದ್ದರೋ, ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್.ವೈ. ಮೇಟಿ ಸದಾ ಬೆಂಬಲವಾಗಿ ನಿಂತಿದ್ದರು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟವೂ ಉಮೇಶ್ ಮೇಟಿ ಅವರ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.
ನಮ್ಮ ಕುಟುಂಬದಲ್ಲಿ ಈಗ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮುಖ್ಯಮಂತ್ರಿಗಳು ಎಲ್ಲಾ ಗೊಂದಲಗಳನ್ನು ಬಗೆಹರಿಸಿದ್ದಾರೆ. ಈಗ ನಾವು ಎಲ್ಲರೂ ಒಗ್ಗೂಡಿ ಚುನಾವಣೆ ನಡೆಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನನ್ನ ಸಹೋದರ ಉಮೇಶ್ ಮೇಟಿ ಅವರ ಗೆಲುವು ಶತಪ್ರತಿಶತ ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande