
ಬಾಗಲಕೋಟೆ, 24 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿರುವ ಹಿನ್ನೆಲೆ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ.
ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರು ಇಂದು ಬಾಗಲಕೋಟೆ ನಗರದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದರು. ನಗರದಲ್ಲಿನ ಮನೆ ಮನೆಗಳಿಗೆ ತೆರಳಿ ಮತಯಾಚನೆ ನಡೆಸುವ ಮೂಲಕ ಪ್ರಚಾರ ಕಾರ್ಯ ಚುರುಕುಗೊಳಿಸಿದರು.
ನಗರದ ಮೋಟಗಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಪ್ರಚಾರ ಆರಂಭಿಸಿದ ಅವರು, ಕೌಲಪೇಟೆ, ದೊಡ್ಡಸಾಬನ ಓಣಿ ಹಾಗೂ ಹಳೆಪೇಟೆ ಪ್ರದೇಶಗಳಲ್ಲಿ ಮತದಾರರನ್ನು ಭೇಟಿ ಮಾಡಿ ಬೆಂಬಲ ಕೋರಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಚರಂತಿಮಠ, ಅನುಕಂಪದಿಂದ ಮತದಾರರು ತಮ್ಮ ನಿಲುವನ್ನು ಬದಲಿಸುವುದಿಲ್ಲ. ಒಂದು ಹಂತದವರೆಗೆ ಮಾತ್ರ ಅನುಕಂಪದ ಕಣ್ಣೀರು ಕೈ ಹಿಡಿಯಬಹುದು, ಆದರೆ ಅದೇ ಅಂತಿಮ ನಿರ್ಧಾರವಾಗುವುದಿಲ್ಲ. ಅದರಿಂದಲೇ ಗೆಲುವು ಸಾಧಿಸುತ್ತೇವೆ ಎಂದು ಭಾವಿಸುವುದು ಭ್ರಮೆ ಎಂದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ವಿರುದ್ಧ ಲೇವಡಿ ಮಾಡಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಪಂಚ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಈ ಬಾರಿ ಜನರು ನಿರ್ಧಾರ ಮಾಡಿದ್ದು ನನ್ನ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಹಿನ್ನೆಲೆ ಬಾಗಲಕೋಟೆಯಲ್ಲಿ ನಾಲ್ಕು-ಐದು ದಿನ ಉಳಿಯಲಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “2.50 ಲಕ್ಷ ಮತದಾರರ ಮತವನ್ನು ಅವರು ಒಬ್ಬರೇ ಹಾಕುತ್ತಾರಾ?” ಎಂದು ವ್ಯಂಗ್ಯವಾಡಿದರು. ಅವರ ಪ್ರಚಾರದಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು.
ಇದೇ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ನಿಮ್ಮ ಪ್ರಚಾರಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚರಂತಿಮಠ, ಯತ್ನಾಳ್ ಅವರು ನನ್ನ ಚುನಾವಣಾ ಪ್ರಚಾರಕ್ಕೆ ಬರುವುದು ಖಚಿತ. ಈ ಕುರಿತು ಈ ಹಿಂದೆಯೇ ಹೇಳಿದ್ದೇನೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ನನ್ನ ಪರವಾಗಿ ಪ್ರಚಾರ ಮಾಡಲು ಬರುತ್ತಿದ್ದಾರೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande