
ಬೆಂಗಳೂರು, 24 ಮಾರ್ಚ್ (ಹಿ.ಸ.):
ಆ್ಯಂಕರ್:
ಕೇರಳಂದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿ ₹10 ಕೋಟಿ ಅನುದಾನ ನೀಡಿರುವುದನ್ನು ಪ್ರತಿ ಪಕ್ಷದ ನಾಯಕ ಆರ್. ಅಶೋಕ ತೀವ್ರವಾಗಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು 2025-26ನೇ ಸಾಲಿನ ಪೂರಕ ಅಂದಾಜಿನಲ್ಲಿ, ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳ ಪುನರ್ವಸತಿಗಾಗಿ ವಯನಾಡಿಗೆ ಮತ್ತೊಮ್ಮೆ ₹10 ಕೋಟಿ ಹೆಚ್ಚುವರಿ ಅನುದಾನ ನೀಡಿದೆ. ವಯನಾಡು ಕ್ಷೇತ್ರವನ್ನು ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ.
ಈ ನಿರ್ಧಾರವನ್ನು ಪ್ರಶ್ನಿಸಿರುವ ಅಶೋಕ, “ರಾಜ್ಯದ ಹಣಕಾಸು ಪರಿಸ್ಥಿತಿ ದುರ್ಬಲವಾಗಿರುವಾಗ ಹೊರರಾಜ್ಯಕ್ಕೆ ಅನುದಾನ ನೀಡುವುದು ಸರಿಯಲ್ಲ” ಎಂದಿದ್ದಾರೆ. ರಾಜ್ಯದಲ್ಲೇ ಕಸ ವಿಲೇವಾರಿ ಸಂಸ್ಥೆಗಳು, ಸರ್ಕಾರಿ ನೌಕರರ ಸಂಬಳ, ಗುತ್ತಿಗೆದಾರರ ಬಾಕಿ ಪಾವತಿ, ಸರ್ಕಾರಿ ಶಾಲೆಗಳ ದುರಸ್ತಿ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಯುನಿಫಾರ್ಮ್ ವಿತರಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹಣದ ಕೊರತೆ ಇದೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ, ಸ್ಕ್ಯಾನಿಂಗ್ ಸೇವೆಗಳ ಬಿಲ್ ಪಾವತಿಯಲ್ಲಿ ವಿಳಂಬ, ಶಾಸಕರಿಗೆ ಅನುದಾನ ಕೊರತೆ ಇತ್ಯಾದಿ ಸಮಸ್ಯೆಗಳ ನಡುವೆಯೂ, “ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ನೆರೆ ರಾಜ್ಯಕ್ಕೆ ನೆರವು ನೀಡಲಾಗಿದೆ” ಎಂದು ಅಶೋಕ ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa