ಶಿವಯ್ಯ ಸ್ವಾಮೀಜಿಗಳ ಕಾಲಜ್ಞಾನದ ಭವಿಷ್ಯ: ಅಕ್ರಾಳ–ವಿಕ್ರಾಳ–ಕರಾಳ… ಎಲ್ಲೆಡೆ ಹೈರಾಣ
ವಿಜಯಪುರ, 23 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ನಡೆದ ಶ್ರೀ ಗುರುಚಕ್ರವರ್ತಿ ಸದಾಶಿವ ಮುತ್ತ್ಯಾ ಅವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಶಿವಯ್ಯ ಮಹಾಸ್ವಾಮೀಜಿ ಅವರು ಕಾಲಜ್ಞಾನದ ಭವಿಷ್ಯವಾಣಿಯನ್ನು ನೀಡಿದರು. ಲಗಮವ್ವ ದೇವಿ ದೇವಸ್ಥಾನದ ಎದುರು ಗುರು ಕರ
ಸ್ವಾಮಿ


ವಿಜಯಪುರ, 23 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ನಡೆದ ಶ್ರೀ ಗುರುಚಕ್ರವರ್ತಿ ಸದಾಶಿವ ಮುತ್ತ್ಯಾ ಅವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಶಿವಯ್ಯ ಮಹಾಸ್ವಾಮೀಜಿ ಅವರು ಕಾಲಜ್ಞಾನದ ಭವಿಷ್ಯವಾಣಿಯನ್ನು ನೀಡಿದರು.

ಲಗಮವ್ವ ದೇವಿ ದೇವಸ್ಥಾನದ ಎದುರು ಗುರು ಕರುಣೆಯ ಮೂಲಕ ಮಾತನಾಡಿದ ಸ್ವಾಮೀಜಿಗಳು, “ಅಕ್ರಾಳ, ವಿಕ್ರಾಳ, ಕರಾಳ ಈ ಬಾರಿಯೂ ಇರುತ್ತವೆ.

ಯುದ್ಧ ಅಲ್ಲಿ ಮಾತ್ರವಲ್ಲ, ಇಲ್ಲಿಯೂ ನಡೆದಂತೆಯೇ ಇದೆ,” ಎಂದು ಸಾಂಕೇತಿಕವಾಗಿ ಹೇಳಿದರು.

“`ಶು.ನ.ಕ. ಮೀಟಿಂಗ್ ನಡೆದಿದೆ’ ಎಂಬುದನ್ನು ಉದಾಹರಿಸಿದ ಅವರು, ಶು ಎಂದರೆ ಶುದ್ಧತೆ, ನ ಎಂದರೆ ನಂಬಿಕೆ ಹಾಗೂ ಕ ಎಂದರೆ ಕರ್ತವ್ಯ. ಈ ಮೂರು ಮೌಲ್ಯಗಳು ಒಂದಾಗಿದರೆ ಜಗತ್ತಿನ ಉದ್ಧಾರ ಸಾಧ್ಯ. ಜಗತ್ತು ಉಳಿಯಲು ಈ ತತ್ವಗಳು ಒಂದಾಗಬೇಕು” ಎಂದು ಹೇಳಿದರು.

ಕಾವಿ, ಖಾದಿ ಮತ್ತು ಖಾಕಿ ನಡುವೆ ಜಗಳವಾಗಬಹುದು ಎಂದು ಹಿಂದೆಯೇ ಹೇಳಿದ್ದೆ. ಈಗ ಅದಕ್ಕೆ ಕಪ್ಪು, ಹಸಿರು, ನೀಲಿ ಬಣ್ಣಗಳು ಸೇರಿ ಗದ್ದಲದ ವಾತಾವರಣ ಉಂಟಾಗಿದೆ ಎಂದು ಅವರು ಸೂಚ್ಯವಾಗಿ ನುಡಿದರು.

ಕಳೆದ ಬಾರಿ ಕೇವಲ 3.35 ನಿಮಿಷ ಕಾಲಜ್ಞಾನ ಹೇಳಿದ್ದ ಅವರು, ಈ ಬಾರಿ ಸುಮಾರು 12 ನಿಮಿಷಗಳ ಕಾಲ ಭವಿಷ್ಯದ ಕುರಿತು ಮಾತನಾಡಿದರು. “ಅಹಂಕಾರ ಮಾಡಿದವರು ಮಣ್ಣಾಗುತ್ತಾರೆ. ಗಡ್ಡ, ಗುಡ್ಡ, ಗಿಡ್ಡ ಜಗಳಾಡಿ ಗದ್ದಲ ಮಾಡುತ್ತಾರೆ. ಜಗತ್ತಿನ ಎಲ್ಲೆಡೆ ಯುದ್ಧದ ವಾತಾವರಣ ಕಾಣುತ್ತದೆ” ಎಂದರು.

ಮನುಷ್ಯನ ಮೌಲ್ಯದ ಬಗ್ಗೆ ಮಾತನಾಡಿದ ಅವರು, “ಆನೆ ಬೆಲೆ ಎತ್ತಿಗೆ, ಎತ್ತಿನ ಬೆಲೆ ಕುರಿಗೆ, ಕುರಿಯ ಬೆಲೆ ಕೋಳಿಗೆ… ಕೊನೆಗೆ ಮನುಷ್ಯನಿಗೂ ಕಿಮ್ಮತ್ತಿಲ್ಲದ ಸ್ಥಿತಿ ಉಂಟಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಮಳೆಗಾಲದ ಮುನ್ನೋಟ

ಈ ವರ್ಷದ ಮಳೆಗಾಲದ ಬಗ್ಗೆ ಮಾತನಾಡಿದ ಸ್ವಾಮೀಜಿಗಳು, ಐದು ವಿಧದ ಮಳೆಗಳು ಸಂಭವಿಸಬಹುದು ಎಂದು ಹೇಳಿದರು. ಅತಿವೃಷ್ಟಿ, ಅಲ್ಪವೃಷ್ಟಿ, ಸಮವೃಷ್ಟಿ ಹಾಗೂ ಅನಾವೃಷ್ಟಿ ಸೇರಿದಂತೆ ವಿವಿಧ ರೀತಿಯ ಮಳೆಯ ಪರಿಸ್ಥಿತಿಗಳು ಕಾಣಿಸಬಹುದು ಎಂದು ಸಾಂಕೇತಿಕವಾಗಿ ನುಡಿದರು.

ಹೆಣ್ಣು ಮಕ್ಕಳು ವೇಷಭೂಷಣ ಮತ್ತು ಸಂಭಾಷಣೆಯಲ್ಲಿ ನಮ್ಮ ಭವ್ಯ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.

ಜಾತಿ, ಮತ, ಪಂಥಗಳ ಹೆಸರಿನಲ್ಲಿ ವಿಭಜನೆ ಮಾಡಬೇಡಿ. ಯಾರಾದರೂ “ನೀವು ಯಾರು?” ಎಂದು ಕೇಳಿದರೆ “ನಾವು ಭಾರತೀಯರು” ಎಂದು ಹೇಳಬೇಕು ಎಂದು ಅವರು ಕರೆ ನೀಡಿದರು.

ಭಕ್ತಿ ಸ್ವರೂಪದ ಹೇಳಿಕೆ

ಚಹಾ ಮಾರುವವನು ಪ್ರಧಾನಿಯಾಗುತ್ತಾನೆ ಎಂದು ಅನೇಕ ವರ್ಷಗಳ ಹಿಂದೆ ಸೂಚ್ಯವಾಗಿ ಹೇಳಿದ್ದ ಸ್ವಾಮೀಜಿಗಳ ಮಾತು ನಂತರ ಸತ್ಯವಾಯಿತು ಎಂದು ಭಕ್ತರು ಸ್ಮರಿಸಿದರು.

ಕಾಲಜ್ಞಾನ ಹೇಳಿಕೆಯ ನಂತರ ಪಂಚಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಉದ್ಯಮಿ ಬಾಬುಗೌಡ ಬಿರಾದಾರ ಅವರು ಸ್ವಾಮೀಜಿಗಳಿಗೆ ಪಾದಪೂಜೆ ನೆರವೇರಿಸಿದರು. ಸಹಸ್ರಾರು ಭಕ್ತರು ಕಾಲಜ್ಞಾನ ಕೇಳಲು ನೆರೆದಿದ್ದು, ಕಾರ್ಯಕ್ರಮ ಸ್ಥಳದಲ್ಲಿ ನಿಶ್ಶಬ್ದ ವಾತಾವರಣ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, “ಶ್ರೀ ಶಿವಯ್ಯ ಮಹಾಸ್ವಾಮೀಜಿಗಳ ಹೇಳಿಕೆಗಳಲ್ಲಿ ಆಳವಾದ ಅರ್ಥ ಅಡಗಿರುತ್ತದೆ. ಹಿಂದೆಯೂ ಅವರು ಹೇಳಿದ ಹಲವು ಮಾತುಗಳು ಸತ್ಯವಾಗಿವೆ,” ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande