
ಬೆಂಗಳೂರು, 23 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಹೆಚ್ಚಿಸಲಾಗಿದ್ದು, ಹೆಚ್ಚುವರಿಯಾಗಿ 1,000 ಸಿಲಿಂಡರ್ ಸೇರಿಸಿ ಒಟ್ಟು 10,000 ಸಿಲಿಂಡರ್ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗ್ಯಾಸ್ ಕಂಪನಿಗಳು ಹಾಗೂ ಹೋಟೆಲ್ ಸಂಘದೊಂದಿಗೆ ನಡೆಸಿದ ಸಭೆಯ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಇದರಿಂದ ಹೋಟೆಲ್, ಡಾಬಾ, ಹಾಸ್ಟೆಲ್, ಪಿಜಿ ಹಾಗೂ ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ವಲಯಗಳಿಗೆ ಅನುಕೂಲವಾಗಲಿದೆ ಎಂದರು.
ಅಕ್ರಮ ತಡೆಗಟ್ಟುವ ಉದ್ದೇಶದಿಂದ ಇನ್ಮುಂದೆ ವಾಣಿಜ್ಯ ಉದ್ದೇಶಕ್ಕೆ ಗ್ಯಾಸ್ ಬಳಕೆದಾರರಿಗೆ ನೋಂದಣಿ ಕಡ್ಡಾಯವಾಗಿದೆ. ಎಲ್ಲರೂ ಗೇಲ್ ಕಂಪನಿಯೊಂದಿಗೆ ಒಂದು ವಾರದೊಳಗೆ ನೋಂದಣಿ ಮಾಡಿಸಬೇಕು. ನೋಂದಣಿ ಮಾಡದಿದ್ದರೆ ಗ್ಯಾಸ್ ಪೂರೈಕೆ ದೊರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ 10 ಸಾವಿರ ಸಿಲಿಂಡರ್‌ಗಳನ್ನು ಎಲ್ಲಾ ವಾಣಿಜ್ಯ ಬಳಕೆದಾರರಿಗೆ ಹಂಚಿಕೆ ಮಾಡಲಾಗುವುದು. ಹೋಟೆಲ್ ಕ್ಷೇತ್ರಕ್ಕೆ ಕಳೆದ ವಾರ 1,000 ಸಿಲಿಂಡರ್‌ಗಳನ್ನು ನೀಡಲಾಗುತ್ತಿತ್ತು, ಆದರೆ ಈಗ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಹೋಟೆಲ್ ಮಾಲೀಕರು ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ₹2 ಕಡಿಮೆ ಮಾಡುವಂತೆ ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa