
ಗದಗ, 21 ಮಾರ್ಚ್ (ಹಿ.ಸ.)
ಆ್ಯಂಕರ್:- ಇಂದಿನ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ತಮ್ಮ ಕೌಶಲ್ಯ ಮತ್ತು ಪರಿಶ್ರಮದ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷೆ ಉಮಾ ರೆಡ್ಡಿ ಅಭಿಪ್ರಾಯಪಟ್ಟರು.
ಗದಗ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಕೈಗಾರಿಕಾ ವಸ್ತು ಪ್ರದರ್ಶನ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮಹಿಳೆಯಲ್ಲೂ ಅಪಾರ ಸಾಮರ್ಥ್ಯ ಅಡಕವಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಮಹಿಳೆಯರು ಸ್ವಾವಲಂಬಿಗಳಾಗುವುದರ ಜೊತೆಗೆ ಇತರರಿಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದು ಹೇಳಿದರು.
ಮಹಿಳೆಯರು ತಮ್ಮ ಜೀವನದಲ್ಲಿ ಎದುರಿಸುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ಮೂಲಕ ಮುಂದೆ ಬರಬೇಕು. ಸರ್ಕಾರ ಹಾಗೂ ವಿವಿಧ ಸಂಸ್ಥೆಗಳ ನೆರವನ್ನು ಸದ್ಬಳಕೆ ಮಾಡಿಕೊಂಡರೆ ಮಹಿಳೆಯರು ಸಮಾಜದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಚಾಲಕಶಕ್ತಿಯಾಗಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಕ್ಕಳ ಸಂರಕ್ಷಣಾಧಿಕಾರಿ ಶ್ರೀಮತಿ ರಾಜೇಶ್ವರಿ ಮೇಟಿ, ಮಹಿಳೆಯರು ಮಕ್ಕಳ ಪೋಷಣೆ ಮತ್ತು ಅವರ ಭವಿಷ್ಯದ ಬಗ್ಗೆ ಹೆಚ್ಚಿನ ಜಾಗೃತಿಯೊಂದಿಗೆ ನಡೆದುಕೊಳ್ಳಬೇಕು. ಮಾನಸಿಕ ಹಾಗೂ ಆರ್ಥಿಕವಾಗಿ ಸಬಲರಾಗುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ತಂತ್ರಜ್ಞಾನ ಅಭಿವೃದ್ಧಿಯ ಪರಿಣಾಮವಾಗಿ ಆನ್ಲೈನ್ ವ್ಯಾಪಾರ ಕ್ಷೇತ್ರ ಮಹಿಳೆಯರಿಗೆ ಹೊಸ ದಾರಿಗಳನ್ನು ತೆರೆದಿದ್ದು, ಮನೆಯಲ್ಲೇ ಕುಳಿತು ಉದ್ಯಮ ಆರಂಭಿಸುವ ಅವಕಾಶಗಳು ಹೆಚ್ಚಾಗಿವೆ. ಸರ್ಕಾರ ಮಹಿಳೆಯರ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಸಹಾಯ ಲಭ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಅವರು ಮಾತನಾಡಿ, “ಮಹಿಳೆ ಅಬಲೇ ಅಲ್ಲ, ಸಬಲೇ” ಎಂಬ ಮಾತು ಇಂದಿನ ಮಹಿಳೆಯ ಸಾಧನೆಯ ಮೂಲಕ ಸಾಬೀತಾಗಿದೆ. ಶಿಕ್ಷಣ, ಜ್ಞಾನ, ಯೋಗ ಮತ್ತು ಪರಿಶ್ರಮದಿಂದ ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.
ಶಿರಹಟ್ಟಿ ಭಾವೈಕ್ಯತೆ ಮಹಾಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ, ಮಹಿಳೆಯರು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಜೀವನದಲ್ಲಿ ಮುಂದುವರೆಯಬೇಕು. ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.
ಸಂಗಪ್ಪ ಗುಡಿಮನಿ ಮಾತನಾಡಿ, ಮಹಿಳೆಯರು ಮನೆ ಮತ್ತು ವ್ಯವಹಾರ ಎರಡನ್ನೂ ಸಮರ್ಥವಾಗಿ ನಿರ್ವಹಿಸುವ ಶಕ್ತಿಯನ್ನು ಹೊಂದಿದ್ದಾರೆ. ಇಂದಿನ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಅವರು ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ, 2019ರಲ್ಲಿ ಆರಂಭವಾದ ಮಹಿಳಾ ಘಟಕವು ಇದೀಗ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಮಹಿಳೆಯರಿಗೆ ತರಬೇತಿ ಕಾರ್ಯಾಗಾರಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಮಹಿಳಾ ಉದ್ಯಮಿಗಳಿಂದ ತಯಾರಿಸಲಾದ ಕೈಗಾರಿಕಾ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಪ್ರದರ್ಶನದಲ್ಲಿ ಸ್ಥಳೀಯ ಮಹಿಳೆಯರ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವ್ಯಾಪಾರಿಕ ಅವಕಾಶಗಳು ಹೆಚ್ಚುವ ನಿರೀಕ್ಷೆ ಮೂಡಿದೆ.
ಈ ಸಂದರ್ಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳಾದ ಸುವರ್ಣ ಎಸ್. ಮದರಿಮಠ (ಸಹನಾ ಟ್ರೇಡರ್ಸ್) ಮತ್ತು ಸುನಿತಾ ಕೆ. ಪಾಟೀಲ (ಓಂಕಾರ ಅಸೋಸಿಯೇಟ್ಸ್) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿಗಳು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಮಹಿಳಾ ಶಕ್ತಿಗೆ ಉತ್ತೇಜನ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP