
ಕೋಲಾರ ೨೧ ಮಾರ್ಚ್ (ಹಿ.ಸ):
ಆ್ಯಂಕರ್ : ಕೋಲಾರ ತಾಲೂಕಿನ ಸೀತಿ ಗ್ರಾಮದಲ್ಲಿ ಶ್ರೀ ಪತೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವನ್ನು ಮಾರ್ಚ್ ೨೨ರಂದು ಭಾನುವಾರ ನಡೆಯಲಿದೆ. ಸುಮಾರು ೧೫೦೦ ವರ್ಷಗಳ ಇತಿಹಾಸವಿರುವ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಈ ಬಾರಿ ಹೊಸ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೀತಿ ಹೊಸೂರು ಮುರಳಿಗೌಡ ಹೇಳಿದರು.
ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿ, ಶ್ರೀ ಪತೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ೧-೩೦ ನಿಮಿಷಕ್ಕೆ ಆದಿಚುಂಚನಗಿರಿ ಶ್ರೀ ಮಠದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಅವರು ಚಾಲನೆ ನೀಡಲಿದ್ದಾರೆ ಎಂದರು.
ಮಾರ್ಚ್ ೨೨ರಂದು ಭಾನುವಾರ ಸಂಜೆ ರಸ ಸಂಜೆ ಕಾರ್ಯಕ್ರಮವನ್ನು ಸೀತಿ ಗ್ರಾಮದಲ್ಲಿ ಸೀತಿ ಸಂಗೀತ ಉತ್ಸವ ಹೆಸರಿನಲ್ಲಿ ಆಯೋಜಿಸಲಾಗಿದ್ದು, ರಸಸಂಜೆ ಕಾರ್ಯಕ್ರಮವನ್ನು ಕಳೆದ ಹತ್ತು ವರ್ಷಗಳಿಂದ ಮುಂದುವರೆಸಿಕೊಂಡು ಬರಲಾಗಿದೆ, ಈ ನಿಟ್ಟಿನಲ್ಲಿ ಸುಮಾರು ೧೫ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ, ಸಚಿವ ಆರ್. ವಿ. ತಿಮ್ಮಾಪುರ, ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ಡಾ. ರೂಪ ಶಶಿಧರ್, ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್, ಸೇರಿದಂತೆ ಜಿಲ್ಲೆಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸೀತಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ರಂಜಿಸಲು, ಕನ್ನಡ ಚಿತ್ರರಂಗದ ಖ್ಯಾತಿಯ ನಟ ಡಾಲಿ ಧನಂಜಯ್, ನಟಿ ಸೋನಲ್ ಮೊಂಥೆರೋ, ಬಿಗ್ ಬಾಸ್ ೧೨ರ ಆವೃತ್ತಿಯ ಅಶ್ವಿನಿ ಗೌಡ, ಅಮೃತಾಂಜನ್ ಚಿತ್ರತಂಡದ ನಟ, ನಟಿಯರು, ಹಾಸ್ಯ ನಟರು, ಹಾಗೂ ಸ್ಥಳೀಯ ಕಲಾವಿದರಾದ ಗೀತಾ ರಾಘವೇಂದ್ರ, ಮಂಜು ದೊಡ್ಡೀರಪ್ಪ, ವೈ. ಜಿ. ಉಮಾ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್