ಗ್ರಾಮೀಣ ಶಾಲೆಗಳ ಬಲವರ್ಧನೆಗೆ ಭಾರತ್ ಸುಧಾರ್ ಸಂಸ್ಥೆ ಗ್ರೀನ್ ಬೋರ್ಡ್ ವಿತರಣೆ
ಗ್ರಾಮೀಣ ಶಾಲೆಗಳ ಬಲವರ್ಧನೆಗೆ ಭಾರತ್ ಸುಧಾರ್ ಸಂಸ್ಥೆ ಗ್ರೀನ್ ಬೋರ್ಡ್ ವಿತರಣೆ
ಗ್ರಾಮೀಣ ಶಾಲೆಗಳ ಬಲವರ್ಧನೆಗೆ ಭಾರತ್ ಸುಧಾರ್ ಸಂಸ್ಥೆ ಗ್ರೀನ್ ಬೋರ್ಡ್ ವಿತರಣೆ


ಕೋಲಾರ, ೨೧ ಮಾರ್ಚ್ (ಹಿ.ಸ)

ಆ್ಯಂಕರ್ : ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಪ್ರಗತಿ ಮತ್ತು ಬಲವರ್ಧನೆಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹೃದಯವಂತಿಕೆ ಮಾತ್ರವಲ್ಲ ಅದು ಪ್ರತಿಯೊಬ್ಬರ ಕರ್ತವ್ಯವೂ ಆಗಬೇಕು ಎಂದು ಭಾರತ್ ಸುಧಾರ್ ಸಂಸ್ಥೆಯ ಕಿರಣ್ ಅಭಿಪ್ರಾಯಪಟ್ಟರು.

ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ನಗರದಲ್ಲಿ ಕೋಲಾರ ಜಿಲ್ಲೆಯ ಐವತ್ತು ಸರ್ಕಾರಿ ಶಾಲೆಗಳಿಗೆ ತಮ್ಮ ಸಂಸ್ಥೆಯಿಂದ ಗ್ರೀನ್ ಬೋರ್ಡ್ ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು, ಇದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯೂ ಆಗಬೇಕು ಎಂದ ಅವರು, ಈ ಶಾಲೆಗಳಿಗೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿ ಶಕ್ತಿ ತುಂಬಬೇಕು. ಈಗಾಗಲೇ ನಮ್ಮ ಸಂಸ್ಥೆಯಿಂದ ಜಿಲ್ಲೆಯ ಮುಳಬಾಗಿಲಿನ ನಾಲ್ಕು ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಲಾಗಿದೆ,ಬಂಗಾರಪೇಟೆಯ ಮಾಗುಂದಿಯಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ಎರಡು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಮತ್ತು ಜೂನ್ ಒಳಗೆ ಕೆಲವು ಶಾಲೆಗಳಿಗೆ ಡೆಸ್ಕ್ ವಿತರಿಸಲಾಗುವುದು. ನಮ್ಮ ಸಂಸ್ಥೆ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಗೆಳೆಯರ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದೆ ಎಂದ ಅವರು, ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯಾಗದಂತೆ ಕ್ರಮವಹಿಸಲಾಗುತ್ತಿದೆ, ಮತ್ತಷ್ಟು ನೆರವು ಹರಿಸುವ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ನೆರವು ಮುಂದುವರೆಸುವುದಾಗಿ ತಿಳಿಸಿದರು.

ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ಮಾತನಾಡಿ, ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳ ನಿಸ್ವಾರ್ಥ ಸೇವೆ ಶ್ಲಾಘನೀಯ, ಭಾರತ್ ಸುಧಾರ್ ಸಂಸ್ಥೆಯಂತಹ ಅನೇಕ ದಾನಿಗಳನ್ನು ಹುಡುಕಿ ಶಾಲೆಗಳಿಗೆ ನೆರವು ಹರಿಸುವ ಇವರ ಪ್ರಯತ್ನ ಹಲವಾರು ವರ್ಷಗಳಿಂದ ಮುಂದುವರೆದಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸುವ ಇವರ ಬದ್ದತೆ ಮೆಚ್ಚುವಂತದ್ದು. ಗೆಳೆಯರ ಬಳಗ ಬಂಗಾರಪೇಟೆಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಾಕಷ್ಟು ಸಹಾಯ ಹಸ್ತ ನೀಡುತ್ತಿದೆ ಇದಕ್ಕೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದ ಅವರು, ಶಾಲೆಗಳಿಗೆ ಸುಣ್ಣ,ಬಣ್ಣ ಬಳಿಯುವ ಕಾರ್ಯದಲ್ಲಿ ನಿಮ್ಮೊಂದಿಗೆ ನಾನು ಬ್ರೆಷ್ ಹಿಡಿದು ಕೆಲಸ ಮಾಡುವುದಾಗಿ ತಿಳಿಸಿದರು.

ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಭಾರತ್ ಸುಧಾರ್ ಸಂಸ್ಥೆ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟ. ಇಂತಹ ಅನೇಕ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗಾಗಿ ಕೆಲಸ ಮಾಡುತ್ತಿವೆ ನಮ್ಮ ಬಳಗದಿಂದ ಎಲ್ಲ ರೀತಿಯ ಸಹಕಾರ ನೀಡುವುದರ ಜೊತೆಗೆ ನಿಮ್ಮ ಜೊತೆ ನಾವೂ ನಿಲ್ಲುತ್ತೇವೆ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತೇವೆ. ಶಿಕ್ಷಕ ಗೆಳೆಯರ ಬಳಗ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ನೋಟ್ ಪುಸ್ತಕ ಬ್ಯಾಗ್, ಸಮವಸ್ತ್ರ, ವಾಟರ್ಫಿಲ್ಟರ್, ಸ್ಮಾರ್ಟ್ ಬೋರ್ಡ್ ಹೀಗೆ ನೂರಾರು ರೀತಿಯ ಕೊಡುಗೆ ನೀಡಿದೆ, ಇಂತಹ ಸಾಮಾಜಿಕ ಕಾರ್ಯಗಳಿಗೆ ಅನೇಕ ದಾನಿಗಗಳು, ಸಂಸ್ಥೆಗಳು ನೆರವಾಗಿ ನಿಂತಿವೆ, ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಾವು ಕೆಲಸ ಮಾಡಿದ್ದೇವೆ ಎಂದರು.

ಬಂಗಾರಪೇಟೆ ಶಿಕ್ಷಕರ ಸಂಘದ ಅಧ್ಯಕ್ಷ ಆಂಜಿನೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ನಮ್ಮ ಜೊತೆ ಇಂತಹ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಭಾರತ್ ಸುಧಾರ್ ಸಂಸ್ಥೆ ಗೆಳೆಯರ ಬಳಗದೊಂದಿಗೆ ಸೇರಿ ಕೋಲಾರ ಜಿಲ್ಲೆಯಾದ್ಯಂತ ಅನೇಕ ಕೆಲಸಗಳನ್ನು ಮಾಡಿದ್ದು, ಬಂಗಾರಪೇಟೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಗೆಳೆಯರ ಬಳಗದ ಕಾರ್ಯದರ್ಶಿ ವೀರಣ್ಣಗೌಡ ಕಾರ್ಯಕ್ರಮ ನಿರೂಪಿಸಿ, ಮುಂದಿನ ತಿಂಗಳು ಕೋಲಾರ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಿಗೂ ಗ್ರೀನ್ ಬೋರ್ಡ್ ಕೊಡಲು ಸಂಸ್ಥೆ ಮನಸ್ಸು ಮಾಡಬೇಕು ಎಂದು ಮನವಿ ಮಾಡಿ, ನೀವು ನೀಡಿದ ನೆರವನ್ನು ಅತ್ಯಂತ ಬದ್ದತೆಯಿಂದ ಶಾಲೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಖಜಾಂಚಿ ಮಾಗುಂದಿ ಶ್ರೀನಿವಾಸ್,ಭಾರತ್ ಸುಧಾರ್ ಸಂಸ್ಥೆಯ ಶಶಿಕಾಂತ್ ರಮೇಶ್ ,ಕೊಳಮೂರು ಶಾಲೆಯ ರಮೇಶ್,ಎನ್ಟಿಜಿ.ಎಸ್.ಎಮ್ ಶಾಲೆ ಸೇರಿದಮತೆ ಐವತ್ತು ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande