
ಗದಗ, 21 ಮಾರ್ಚ್ (ಹಿ.ಸ.)
ಆ್ಯಂಕರ್: ಹಿಂದು-ಮುಸ್ಲಿಂ ಸೌಹಾರ್ದತೆಯ ಸಂದೇಶ ಸಾರುವ ಪವಿತ್ರ ರಂಜಾನ್ ಹಬ್ಬವನ್ನು ಗದಗ ಜಿಲ್ಲೆಯಲ್ಲಿ ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಗದಗ ನಗರದ ಡಂಬಳ ನಾಕಾದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಒಂದೇ ಸ್ಥಳದಲ್ಲಿ ಸೇರಿ ಸಾಮೂಹಿಕವಾಗಿ ನಮಾಜ್ ಸಲ್ಲಿಸುವ ಮೂಲಕ ಹಬ್ಬದ ಮಹತ್ವವನ್ನು ಹೆಚ್ಚಿಸಿದರು.
ಮುಂಜಾನೆ ಈದ್ಗಾ ಮೈದಾನದತ್ತ ಮುಸ್ಲಿಂ ಬಾಂಧವರ ಹರಿದು ಬಂದಿದ್ದು, ಪರಂಪರೆಯ ಉಡುಪುಗಳಲ್ಲಿ ಭಕ್ತರು ಭಾಗವಹಿಸಿದರು. ಅಲ್ಲಾಹನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇಶದಲ್ಲಿ ಶಾಂತಿ, ಸಮೃದ್ಧಿ ಹಾಗೂ ಸಹೋದರತ್ವ ನೆಲೆಸಲಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅವರು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲರೂ ಸಹೋದರರಾಗಿ ಬಾಳಬೇಕು, ಧರ್ಮಗಳ ನಡುವೆ ಏಕತೆ ಮತ್ತು ಪರಸ್ಪರ ಗೌರವ ಅತ್ಯಂತ ಮುಖ್ಯವೆಂದು ಹೇಳಿದರು. ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.
ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಂಡು “ಈದ್ ಮುಬಾರಕ್” ಎಂದು ಶುಭಾಶಯ ವಿನಿಮಯ ಮಾಡಿಕೊಂಡರು.
ಮಕ್ಕಳು, ಯುವಕರು ಹಾಗೂ ಹಿರಿಯರು ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದು, ನಗರದಲ್ಲಿ ಹಬ್ಬದ ವಾತಾವರಣ ಕಂಡುಬಂತು.
ರಂಜಾನ್ ಹಬ್ಬವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಮಾನವೀಯತೆ, ಸಹೋದರತ್ವ ಹಾಗೂ ಭಾವೈಕ್ಯತೆಯ ಮೌಲ್ಯಗಳನ್ನು ಸಾರುವ ಹಬ್ಬವಾಗಿದ್ದು, ಗದಗ ಜಿಲ್ಲೆಯಲ್ಲಿ ಅದನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP