
ವಿಜಯಪುರ, 20 ಮಾರ್ಚ್ (ಹಿ.ಸ.)
ಆ್ಯಂಕರ್ : ವಂದಾಲ್ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 62ರ ಕಾಮಗಾರಿಯನ್ನು ಮುಂದೂಡಿರುವ ಹಿನ್ನೆಲೆ, ಈ ಹಿಂದೆ ಭಾಗಶಃ ರದ್ದುಗೊಳಿಸಲಾಗಿದ್ದ ಹಾಗೂ ನಿಯಂತ್ರಣ ವಿಧಿಸಲಾಗಿದ್ದ ಕೆಲವು ರೈಲು ಸೇವೆಗಳನ್ನು ಪುನರಾರಂಭಿಸಲಾಗಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆಯ ಹುಬ್ಬಳ್ಳಿ ವಿಭಾಗ ಪ್ರಕಟಣೆ ತಿಳಿಸಿದೆ.
ಈ ಮೊದಲು ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಂಡಿದ್ದ ವಿಶೇಷ ರೈಲು ಸಂಖ್ಯೆ 07329 ಎಸ್ಎಸ್ಎಸ್ ಹುಬ್ಬಳ್ಳಿ–ವಿಜಯಪುರ ಮಾ.22ರಂದು ಪೂರ್ಣ ಮಾರ್ಗದಲ್ಲಿ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ. ಅದೇ ರೀತಿ ವಿಶೇಷ ರೈಲು ಸಂಖ್ಯೆ 07330 ವಿಜಯಪುರ–ಎಸ್ಎಸ್ಎಸ್ ಹುಬ್ಬಳ್ಳಿ ಮಾ.23ರಂದು ಪೂರ್ಣ ಮಾರ್ಗದಲ್ಲಿ ಸಂಚರಿಸಲಿದೆ.
ಇದರ ಜೊತೆಗೆ, ವಂದಾಲ್ ಮತ್ತು ಬಸವನ ಬಾಗೇವಾಡಿ ರೋಡ್ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 62ರ ಕಾಮಗಾರಿಯ ಹಿನ್ನೆಲೆ ಮಾ.21 ಮತ್ತು 22ರಂದು ಸುಮಾರು 30 ನಿಮಿಷಗಳ ನಿಯಂತ್ರಣ ವಿಧಿಸಲಾಗಿದ್ದ 56904 ಧಾರವಾಡ–ಸೊಲ್ಲಾಪುರ ಪ್ಯಾಸೆಂಜರ್ ರೈಲು ಮೇಲಿನ ನಿಯಂತ್ರಣವನ್ನು ಸಹ ಹಿಂತೆಗೆದುಕೊಳ್ಳಲಾಗಿದೆ. ಹೀಗಾಗಿ ಈ ರೈಲು ನಿಗದಿತ ವೇಳಾಪಟ್ಟಿಯಂತೆ ಓಡಲಿದೆ.
ಆದರೆ, ಮಾ.24ರಂದು ಹುಬ್ಬಳ್ಳಿಯಿಂದ ಹೊರಡುವ 07329 ಎಸ್ಎಸ್ಎಸ್ ಹುಬ್ಬಳ್ಳಿ–ವಿಜಯಪುರ ವಿಶೇಷ ರೈಲು ಬಾಗಲಕೋಟೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದ್ದು, ಬಾಗಲಕೋಟೆ–ವಿಜಯಪುರ ನಡುವಿನ ಸಂಚಾರ ರದ್ದಾಗಲಿದೆ. ಹಾಗೆಯೇ, ಮಾ.25ರಂದು ವಿಜಯಪುರದಿಂದ ಹೊರಡಬೇಕಿದ್ದ 07330 ವಿಜಯಪುರ–ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು ವಿಜಯಪುರ ಬದಲು ಬಾಗಲಕೋಟೆ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ದಕ್ಷಿಣ ಪಶ್ಚಿಮ ರೈಲ್ವೆ ಸಾರ್ವಜನಿಕ ಸಂಪರ್ಕ ವಿಭಾಗವು ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲು ವೇಳಾಪಟ್ಟಿ ಮತ್ತು ನಿಲ್ದಾಣ ಮಾಹಿತಿ ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande