ಪಪ್ಪಾಯಿ ತೋಟ ನೆಲಕಚ್ಚಿ ರೈತರಿಗೆ ಲಕ್ಷಾಂತರ ನಷ್ಟ
ಗದಗ, 20 ಮಾರ್ಚ್ (ಹಿ.ಸ.) ಆ್ಯಂಕರ್: ಮನೆ ಮಗ ಊಂಡ್ರೆ ಕೇಡಲ್ಲ, ಮಳೆ ಬಂದ್ರೆ ಕೇಡಲ್ಲ” ಎಂಬ ಮಾತಿದೆ. ಆದರೆ ಅಕಾಲಿಕವಾಗಿ ಸುರಿದ ಮಳೆ ಹಾಗೂ ಬಿರುಗಾಳಿಯು ಗದಗ ಜಿಲ್ಲೆಯ ರೈತರ ಬದುಕನ್ನೇ ಸಂಕಷ್ಟದ ಅಂಚಿಗೆ ತಳ್ಳಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಭಾರೀ ಗಾಳಿಯಿಂದ ಜಿಲ್ಲೆಯ ಹಲವು ಭ
ಫೋಟೋ


ಗದಗ, 20 ಮಾರ್ಚ್ (ಹಿ.ಸ.)

ಆ್ಯಂಕರ್: ಮನೆ ಮಗ ಊಂಡ್ರೆ ಕೇಡಲ್ಲ, ಮಳೆ ಬಂದ್ರೆ ಕೇಡಲ್ಲ” ಎಂಬ ಮಾತಿದೆ. ಆದರೆ ಅಕಾಲಿಕವಾಗಿ ಸುರಿದ ಮಳೆ ಹಾಗೂ ಬಿರುಗಾಳಿಯು ಗದಗ ಜಿಲ್ಲೆಯ ರೈತರ ಬದುಕನ್ನೇ ಸಂಕಷ್ಟದ ಅಂಚಿಗೆ ತಳ್ಳಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಭಾರೀ ಗಾಳಿಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ತೋಟಗಾರಿಕೆ ಬೆಳೆಗಳು ಸರ್ವನಾಶವಾಗಿದ್ದು, ರೈತರಲ್ಲಿ ಆತಂಕ ಮತ್ತು ನಿರಾಸೆ ಮೂಡಿಸಿದೆ.

ವಿಶೇಷವಾಗಿ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ರೈತರಿಗೆ ಭಾರೀ ಹೊಡೆತ ಬಿದ್ದಿದೆ.

ತಿರ್ಲಾಪುರ ಸಹೋದರರು ಸುಮಾರು 10 ಎಕರೆ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯನ್ನು ಬೆಳೆದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದರು. ಬೇಸಿಗೆ ಬಿಸಿಲಿನ ನಡುವೆಯೂ ನೀರಾವರಿ ವ್ಯವಸ್ಥೆ ಮಾಡಿಕೊಂಡು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಪ್ಪಾಯಿ ಗಿಡಗಳನ್ನು ಸಮೃದ್ಧವಾಗಿ ಬೆಳೆಸಿದ್ದರು. ಪ್ರತಿಯೊಂದು ಗಿಡದಲ್ಲೂ 70 ರಿಂದ 80 ಹಣ್ಣುಗಳು ಬಿಟ್ಟಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಕೂಡ ಲಭ್ಯವಾಗುತ್ತಿತ್ತು.

ಆದರೆ, ಅಕಾಲಿಕ ಮಳೆ ಹಾಗೂ ಭಾರೀ ಗಾಳಿಯಿಂದ ಸುಮಾರು 2 ಎಕರೆ ಪ್ರದೇಶದಲ್ಲಿನ ನೂರಾರು ಪಪ್ಪಾಯಿ ಗಿಡಗಳು ನೆಲಕಚ್ಚಿವೆ.

ಮಾರಾಟಕ್ಕೆ ಸಿದ್ಧವಾಗಿದ್ದ ಹಣ್ಣುಗಳು ಹಾನಿಗೊಳಗಾಗಿದ್ದು, ರೈತರಿಗೆ ದೊಡ್ಡ ಆರ್ಥಿಕ ನಷ್ಟ ಉಂಟಾಗಿದೆ. 10 ರಿಂದ 15 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಪ್ರಕೃತಿ ವಿಕೋಪ ಭಾರೀ ನಿರಾಸೆ ತಂದಿದೆ.

ಪಪ್ಪಾಯಿ ಬೆಳೆದ ರೈತ ಬಸವರಾಜ್ ತಿರ್ಲಾಪುರ ಮಾತನಾಡಿ, “ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದಿದ್ದೇವೆ. ಈಗ ಮಳೆ ಹಾಗೂ ಗಾಳಿಯಿಂದ ಗಿಡಗಳು ಉರುಳಿಬಿದ್ದಿವೆ. ಸರ್ಕಾರದಿಂದ ತಕ್ಷಣ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.

ಗದಗ ಜಿಲ್ಲೆಯಲ್ಲಿ ನೀರಾವರಿ ವ್ಯವಸ್ಥೆ ಕೊರತೆಯಿಂದ ಹೆಚ್ಚಿನ ರೈತರು ಬೋರವೆಲ್ ಅವಲಂಬಿತ ತೋಟಗಾರಿಕೆ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಕಾಲಿಕ ಮಳೆ ಹಾಗೂ ಗಾಳಿ ಹೊಡೆತ ನೀಡಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಸಾವಯವ ಕೃಷಿ ವಿಧಾನದಲ್ಲಿ ಬೆಳೆದ ಪಪ್ಪಾಯಿ ತೋಟಗಳು ಹಾನಿಗೊಳಗಾಗಿರುವುದು ರೈತರ ಆತ್ಮವಿಶ್ವಾಸಕ್ಕೂ ಧಕ್ಕೆ ತಂದಿದೆ.

ಈ ನಡುವೆ ತೋಟಗಾರಿಕೆ ಇಲಾಖೆಯ ಅಧಿಕಾರಿ ನಿಂಗಪ್ಪ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದು, ಮುಂದಿನ ಕ್ರಮಗಳ ಬಗ್ಗೆ ಭರವಸೆ ನೀಡಿದ್ದಾರೆ. ತೋಟಗಾರಿಕೆ ಅಧಿಕಾರಿ ನಿಂಗಪ್ಪ ಅವರು “ಹಾನಿಯ ಪರಿಶೀಲನೆ ಮಾಡಿ ವರದಿ ಸಲ್ಲಿಸಲಾಗುತ್ತದೆ. ಸರ್ಕಾರದಿಂದ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.

ಒಟ್ಟಾರೆ, ಬೇಸಿಗೆ ಕಾಲದಲ್ಲಿ ಕಷ್ಟಪಟ್ಟು ಬೆಳೆದ ಪಪ್ಪಾಯಿ ಗಿಡಗಳು ನೆಲಕಚ್ಚಿರುವುದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕೆಂಬ ಒತ್ತಾಯ ಗಟ್ಟಿಯಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande