
ವಿಜಯಪುರ, 20 ಮಾರ್ಚ್ (ಹಿ.ಸ.)
ಆ್ಯಂಕರ್ : ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ 2026ರ ನೂತನ ಜಾಹೀರಾತು ನೀತಿಯಲ್ಲಿ ತಿದ್ದುಪಡಿ ತರಬೇಕೆಂದು ಆಗ್ರಹಿಸಿ ಸ್ಥಳೀಯ ಪತ್ರಿಕೆಗಳ ಪ್ರತಿನಿಧಿಗಳು ಶುಕ್ರವಾರ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನಜೀವನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಮನೆ ಮನೆಗೆ ತಲುಪಿಸುವ ಮಹತ್ವದ ಕಾರ್ಯ ನಿರ್ವಹಿಸುತ್ತಿವೆ. ಆದರೆ ಸರ್ಕಾರ ಜಾರಿಗೆ ತಂದಿರುವ ನೂತನ ಜಾಹೀರಾತು ನೀತಿಯಲ್ಲಿನ ಕಠಿಣ ಹಾಗೂ ಅವೈಜ್ಞಾನಿಕ ನಿಯಮಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳಿಗೆ ಭಾರೀ ಹೊಡೆತ ನೀಡಲಿವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಈ ನೀತಿಯಿಂದ ನೂರಾರು ಸ್ಥಳೀಯ ಪತ್ರಿಕೆಗಳು ಮುಚ್ಚುವ ಭೀತಿ ಉಂಟಾಗಿದ್ದು, ಅನೇಕ ಸಂಪಾದಕರು, ಪತ್ರಕರ್ತರು ಹಾಗೂ ಪತ್ರಿಕಾ ವಲಯದ ಕಾರ್ಮಿಕರ ಜೀವನೋಪಾಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಮನವಿಯಲ್ಲಿ, ಸ್ಥಳೀಯ ಪತ್ರಿಕೆಗಳನ್ನು ಹತ್ತಿಕ್ಕುವಂತಿರುವ ಕಠಿಣ ನಿಯಮಗಳನ್ನು ಕೂಡಲೇ ಸರಿಪಡಿಸಬೇಕು ಹಾಗೂ ಸರ್ಕಾರಿ ಜಾಹೀರಾತು ಹಂಚಿಕೆಯಲ್ಲಿ ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತಮ್ಮ ಆಕ್ರೋಶ ಮತ್ತು ಕಳಕಳಿಯನ್ನು ತಲುಪಿಸಿರುವ ಪತ್ರಿಕಾ ಪ್ರತಿನಿಧಿಗಳು, ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಇದರಲ್ಲಿ ಸ್ಥಳೀಯ ಪತ್ರಕರ್ತರು, ಸಂಪಾದಕರು ಹಾಗೂ ಮಾಧ್ಯಮ ಹಕ್ಕುಗಳ ಹೋರಾಟಗಾರರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande