
ನವದೆಹಲಿ, 20 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಇಂದು ಬೆಳಗ್ಗಿನಿಂದಲೇ ಮಧ್ಯಂತರವಾಗಿ ಮಳೆ ಸುರಿಯುತ್ತಿದ್ದು, ದಿನವಿಡೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಪಶ್ಚಿಮ ವ್ಯತ್ಯಯ (ವೆಸ್ಟರ್ನ್ ಡಿಸ್ಟರ್ಬನ್ಸ್) ಪರಿಣಾಮದಿಂದ ದೆಹಲಿ-ಎನ್‌ಸಿಆರ್ ಪ್ರದೇಶದ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದ್ದು, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಪಮಾನದಲ್ಲಿ 6–7 ಡಿಗ್ರಿ ಸೆಲ್ಸಿಯಸ್ ಕುಸಿತ ದಾಖಲಾಗಿದೆ. ಉತ್ತರ ಭಾರತದ ಬಹುತೇಕ ಸಮತಟ್ಟಿನ ಪ್ರದೇಶಗಳಲ್ಲಿ ಗಾಳಿ ಹಾಗೂ ಮಳೆ ತೀವ್ರಗೊಂಡಿದೆ.
ಐಎಂಡಿ ಪ್ರಕಾರ, ದೇಶದ ಸುಮಾರು 19 ರಾಜ್ಯಗಳಲ್ಲಿ ಇಂದು ಮಿಂಚು–ಗುಡುಗು ಸಹಿತ ಮಳೆಯೊಂದಿಗೆ ಬಲವಾದ ಗಾಳಿಯ ಸಾಧ್ಯತೆ ಇದೆ. ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶ ಮತ್ತು ಪಂಜಾಬ್ ಭಾಗಗಳಲ್ಲಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಗಂಟೆಗೆ 50–60 ಕಿಮೀ ವೇಗದ ಧೂಳುಗಾಳಿ ಬೀಸುವ ಸಾಧ್ಯತೆ ಇದ್ದು, ರೈತರ ರಬಿ ಬೆಳೆಗಳಿಗೆ ಹಾನಿ ಉಂಟಾಗುವ ಭೀತಿ ವ್ಯಕ್ತವಾಗಿದೆ.
ಪರ್ವತ ಪ್ರದೇಶಗಳಲ್ಲಿ ಹವಾಮಾನ ತೀವ್ರವಾಗಿ ಬದಲಾಗಿದ್ದು, ಜಮ್ಮು–ಕಾಶ್ಮೀರದ ಗುಲ್ಮಾರ್ಗ್ ಹಾಗೂ ಸೋನಾಮಾರ್ಗ್ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗಿದೆ. ಹಿಮಾಚಲ ಪ್ರದೇಶದ ಲಾಹೌಲ್–ಸ್ಪೀತಿ, ರೋಹ್ತಾಂಗ್ ಮತ್ತು ಕುಲ್ಲು ಮೇಲ್ಭಾಗಗಳಲ್ಲಿ ತಾಜಾ ಹಿಮಪಾತದಿಂದ ತಾಪಮಾನದಲ್ಲಿ 3–5 ಡಿಗ್ರಿ ಇಳಿಕೆ ಕಂಡಿದೆ.
ಇನ್ನು ಬಿಹಾರದಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 50–60 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಛತ್ತೀಸ್‌ಗಢದಲ್ಲಿ ಕೂಡ ಬಿರುಗಾಳಿ (50–70 ಕಿಮೀ ವೇಗದ ಗಾಳಿ) ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಉತ್ತರಾಖಂಡದಲ್ಲಿ ಮಳೆ ಹಾಗೂ ಹಿಮಪಾತ ಮುಂದುವರಿಯುವ ಸಾಧ್ಯತೆ ಇದೆ.
ದಕ್ಷಿಣ ಭಾರತದಲ್ಲೂ ಮಳೆಯ ಅಬ್ಬರ ಕಾಣಿಸಿಕೊಳ್ಳಲಿದ್ದು, ತಮಿಳುನಾಡು, ಕೇರಳ ಹಾಗೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಗುಡುಗು–ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಧೂಳುಗಾಳಿ ಜೊತೆಗೆ ಮಳೆಯಾಗುವ ಸಾಧ್ಯತೆ ಇದೆ. ಗುಜರಾತ್, ಒಡಿಶಾ, ವಿದ್ಯರ್ಭ, ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದಲ್ಲೂ ಕೆಲವೆಡೆ ಚದುರಿದ ಮಳೆಯಾಗಲಿದೆ.
ಐಎಂಡಿ ಮುನ್ಸೂಚನೆಯಂತೆ, ದೆಹಲಿಯಲ್ಲಿ ಮಾರ್ಚ್ 21ರಂದು ಗರಿಷ್ಠ ತಾಪಮಾನ 29–31 ಡಿಗ್ರಿ ಮತ್ತು ಕನಿಷ್ಠ 14–16 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಮಾರ್ಚ್ 22ರಿಂದ 24ರವರೆಗೆ ಗರಿಷ್ಠ ತಾಪಮಾನ 30–34 ಡಿಗ್ರಿವರೆಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಕನಿಷ್ಠ ತಾಪಮಾನ 15–18 ಡಿಗ್ರಿ ನಡುವೆ ಉಳಿಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa