


ಕೊಪ್ಪಳ, 20 ಮಾರ್ಚ್ (ಹಿ.ಸ.)
ಆ್ಯಂಕರ್ : ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 13ರ ಕಾಲುವೆ ಒಡೆದು ಹೋಗಿರುವ ಪರಿಣಾಮದಿಂದ ನಾಶವಾದ ಬೆಳೆಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ವಿಧಾನ ಪರಿಷತ್ ಸಭಾ ನಾಯಕರಾದ ಎನ್. ಎಸ್. ಭೋಸರಾಜು ಹೇಳಿದರು.
ಅವರು ಶುಕ್ರವಾರ ಕೊಪ್ಪಳ ತಾಲ್ಲೂಕಿನ ಬಸಾಪೂರ ಗ್ರಾಮದ ಹತ್ತಿರ ಒಡೆದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 13ರ ವೀಕ್ಷಣೆ ಮಾಡಿದರು. ನಂತರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 13ರ ಕಾಲುವೆ ಒಡೆದ ಪರಿಣಾಮವಾಗಿ ಸುಮಾರು 92 ಹೆಕ್ಟೇರ್ 10 ಗುಂಟೆ ಬೆಳೆ ನಾಶವಾಗಿದೆ ಎಂಬ ಮಾಹಿತಿ ಇದೆ. ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ನೀರವಾರಿ ನಿಗಮ ನಿಯಮಿತದಿಂದ (ಕೆ.ಎನ್.ಎನ್.ಎಲ್) ಪ್ರತಿ ಹೆಕ್ಟೇರಿಗೆ ಸರ್ಕಾರವು ನಿಗದಿಪಡಿಸಿದಂತೆ ನಷ್ಟವಾದ ಬೆಳೆಗೆ ಪರಿಹಾರ ಒದಗಿಸಲಾಗುವುದು ಎಂದರು.
ಕೊಪ್ಪಳ ಹಾಗೂ ರಾಯಚೂರಿಗೆ ಕುಡಿಯಲು ನೀರು ಒದಗಿಸಲು ನೀರಾವರಿ ಇಲಾಖೆಯಿಂದ ಆದೇಶ ಬಂದ ಮೇರೆಗೆ ನೀರು ಬಿಡಲಾಗಿತ್ತು. ಸುಮಾರು 2 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿತ್ತು. ಈ ಸಂದರ್ಭಗಳಲ್ಲಿ 40 ರಿಂದ 50 ಮೀಟರ್ ಕಾಲವೆ ಬೋಂಗು ಬಿದ್ದು ಒಡೆದು ಹೋಗಿದೆ. ಇಲ್ಲಿನ ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಲುವೆ ಒಡೆದಿದೆ. ಕಾಲುವೆ ಒಡೆದ ವಿಚಾರವಾಗಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಹಾಗೂ ಮಸ್ಕಿ ಶಾಸಕರಾದ ಬಸವನಗೌಡ ತುರುವಿಹಾಳ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಕೆ.ಎನ್.ಎನ್.ಎಲ್. ಅಧಿಕಾರಿಗಳು ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್