

ಬಳ್ಳಾರಿ, 20 ಮಾರ್ಚ್ (ಹಿ.ಸ.)
ಆ್ಯಂಕರ್ :ಪರಿಶಿಷ್ಟ ಜಾತಿಯ ಒಳ ಮೀಸಲಾತಿ ನೀತಿಯಲ್ಲಿ ಸಿ ಕೆಟಗರಿಯ 65 ಜಾತಿಗಳಿಗೆ ಅನ್ಯಾಯವಾಗುತ್ತಿದ್ದು
ತಕ್ಷಣವೇ ರದ್ದು ಮಾಡಬೇಕು ಎಂದು ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಎಂ.ಟಿ. ಮಲ್ಲೇಶಪ್ಪ ಅವರು ಆಗ್ರಹಿಸಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗಾರರಿಗೆ ಶುಕ್ರವಾರ ಈ ಮಾಹಿತಿ ನೀಡಿದ ಅವರು, ಮೀಸಲಾತಿಯನ್ನು ಎ.ಬಿ.ಸಿ ವರ್ಗೀಕರಣ ಮಾಡುವಲ್ಲಿ ಸಿ ಕೆಟಗರಿಗೆ ಸಾಕಷ್ಟು ವಂಚನೆಯಾಗುತ್ತಿದೆ. ನೇಮಕಾತಿಯಲ್ಲಿ ಅನೇಕರಿಗೆ ಅನ್ಯಾಯವಾಗುತ್ತಿದೆ. ಕಾರಣ ಹಳೆಯ ಮೀಸಲಾತಿ ನೀತಿಯ ಅಡಿಯಲ್ಲಿಯೇ ಹೊಸ ನೇಮಕಾತಿಗಳನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಒಳ ಮೀಸಲಾತಿಯನ್ನು ಜಾರಿ ಮಾಡಲು ರೂಪಿಸಿರುವ ರೋಸ್ಟರ್ ಕೋಷ್ಟಕವು ಲೋಪಗಳಿಂದ ಕೂಡಿದೆ. ಈ ಕೋಸ್ಟಕವನ್ನು ರದ್ದು ಮಾಡಿ, ಮೂರು ಪ್ರವರ್ಗಗಳಿಗೂ ಸಮಾನವಾಗಿ ನ್ಯಾಯ ಸಿಗುವ ರೀತಿಯಲ್ಲಿ ಪರಿಷ್ಕøತ ಆದೇಶವನ್ನು ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ಭೋವಿ ಜನಾಂಗದ ಜಿಲ್ಲಾಧ್ಯಕ್ಷ ವಿ. ರಾಮಾಂಜನಿ ಅವರು, ಕೇಂದ್ರ ಸರ್ಕಾರ ಜನಗಣತಿಯನ್ನು ಆರಂಭಿಸಿದೆ.
ಕೇಂದ್ರ ಸರ್ಕಾರದ ಜನಗಣತಿ ವರದಿ ಸಲ್ಲಿಕೆ ಆಗುವವರೆಗೂ ಕರ್ನಾಟಕ ಸರ್ಕಾರದ ಅವೈಜ್ಞಾನಿಕ
ಒಳ ಮೀಸಲಾತಿ ನೀತಿಯನ್ನು ರದ್ದು ಮಾಡಬೇಕು. ಕೇಂದ್ರ ಸರ್ಕಾರದ ಜನಗಣತಿ ಆಧರಿಸಿ ಮೀಸಲಾತಿಯನ್ನು ವಿಂಗಡಣೆ ಮಾಡಬೇಕು ಎಂದು ಅವರು ಕೋರಿದರು.
ಒಕ್ಕೂಟದ ಕಾರ್ಯದರ್ಶಿ ವಿ. ಮಹೇಶ್ ಅವರು, ದೇಶವ್ಯಾಪಿ ನಡೆಯಲಿರುವ ಜನಗಣತಿಯ ದತ್ತಾಂಶ ಪ್ರಕಟ ಆಗುವವರೆಗೂ ಕರ್ನಾಟಕ ಸರ್ಕಾರವು ಏಕಪಕ್ಷೀಯ ನಿರ್ಧಾರ ಮಾಡಬಾರದು. ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿ ಹಂಚಿಕೆಯ ಪ್ರಕ್ರಿಯೆ ನಡೆಸುವ ಮುನ್ನ ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಬೇಕು. ಶೈಕ್ಷಣಿಕ, ವಸತಿ ನಿಲಯ ಪ್ರವೇಶ, ನೇಮಕಾತಿಗೆ ರೋಸ್ಟರ್ ಹಂಚಿಕೆ ಮಾಡಿ ಹೊರಡಿಸಿರುವ ಎಲ್ಲಾ ಆದೇಶಗಳನ್ನು, ಸುತ್ತೋಲೆಗಳನ್ನು ತಕ್ಷಣವೆ ಸರ್ಕಾರ ಹಿಂಪಡೆಯಬೇಕು. ಹಳೆಯ ಜಾತಿ ಪ್ರಮಾಣ ಪತ್ರಗಳನ್ನು ನೇಮಕಾತಿ ಸಂದರ್ಭದಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಕರ್ನಾಟಕ ಸರ್ಕಾರದ ಗಮನ ಸೆಳೆಯಲು ಮಾರ್ಚ್ 24 ರ ಮಂಗಳವಾರ ಕೊರಮ ಕೊರಚ ಲಂಬಾಣಿ ಮತ್ತು ಭೋವಿ ಜನಾಂಗದ ಮೂರು ಲಕ್ಷ ಜನರು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂಧು ಗೋಪಿ ನಾಯಕ್ ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲೆಯ `ಕೊಲಂಭೋ' ಸಮಾಜದಿಂದ 2 ಸಾವಿರಕ್ಕೂ ಹೆಚ್ಚು ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕೂಟದ ಗೌರವ ಅಧ್ಯಕ್ಷ ಡಾ.ಹನುಂಮತಪ್ಪ ಅವರು ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ರಾಮುನಾಯ್ಕ, ದೇವಣ್ಣ, ರಂಗಸ್ವಾಮಿ, ಪ್ರಕಾಶ್, ಹುಲುಗಪ್ಪ, ಸಂತೋಷ್ ಇನ್ನಿರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್