ಜಯಂತಿ ಅಂಗವಾಗಿ, ರಕ್ತದಾನ ಶಿಬಿರ ಹಾಗೂ ಉಪನ್ಯಾಸಗಳಿಗೆ ಆದ್ಯತೆ
ಗದಗ, 20 ಮಾರ್ಚ್ (ಹಿ.ಸ.) ಆ್ಯಂಕರ್: ಗದಗ ಜಿಲ್ಲಾಡಳಿತ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರ ಜಯಂತಿಗಳನ್ನು ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲು ಶುಕ್ರವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಜಿಲ್ಲಾಧಿಕಾರಿ ಸಿ.ಎ
ಫೋಟೋ


ಗದಗ, 20 ಮಾರ್ಚ್ (ಹಿ.ಸ.)

ಆ್ಯಂಕರ್: ಗದಗ ಜಿಲ್ಲಾಡಳಿತ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರ ಜಯಂತಿಗಳನ್ನು ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲು ಶುಕ್ರವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈ ಮಹನೀಯರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ, ಸಮಾಜಕ್ಕೆ ಪ್ರೇರಣೆ ನೀಡುವ ಕಾರ್ಯಕ್ರಮಗಳಾಗಿ ರೂಪಿಸಬೇಕು ಎಂದು ತಿಳಿಸಲಾಯಿತು.

ಏಪ್ರಿಲ್ 5 ರಂದು ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಜಿಲ್ಲಾಡಳಿತದಿಂದ ಸಾಂಕೇತಿಕವಾಗಿ ಆಡಿಟೋರಿಯಂ ಹಾಲ್ದಲ್ಲಿ ಆಚರಿಸಲಾಗುವುದು. ಏಪ್ರಿಲ್ 14 ರಂದು ಜಿಲ್ಲಾಡಳಿತದಿಂದ ವಿವಿಧ ಸಂಘಟನೆಗಳೊಂದಿಗೆ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಆಚರಿಸಲಾಗುವುದು. ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾರ್ಯಕ್ರಮ ಯಶಸ್ವಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಸೂಚನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ ಸಮಾಜದ ಮುಖಂಡರು ಹಲವು ಮಹತ್ವದ ಸಲಹೆಗಳನ್ನು ನೀಡಿದರು. ಏಪ್ರಿಲ್ 5ರಂದು ನಡೆಯುವ ಬಾಬು ಜಗಜೀವನ ರಾಮ್ ಜಯಂತಿಯಂದು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಸಮಾಜಮುಖಿ ಕಾರ್ಯಕ್ರಮಕ್ಕೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

ಇದರಿಂದ ಯುವಜನರಲ್ಲಿ ಸಾಮಾಜಿಕ ಹೊಣೆಗಾರಿಕೆ ಮೂಡುವುದರ ಜೊತೆಗೆ ಅಗತ್ಯವಿರುವವರಿಗೆ ರಕ್ತ ಲಭ್ಯವಾಗಲು ಸಹಕಾರಿ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ, ಜಯಂತಿ ದಿನ ಉಪನ್ಯಾಸ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜದ ಗಣ್ಯರು, ಚಿಂತಕರು ಹಾಗೂ ಉಪನ್ಯಾಸಕರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಮುಂಚಿತವಾಗಿ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಮಹನೀಯರ ಜೀವನ ಚರಿತ್ರೆ, ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಗರದಲ್ಲಿ ಸ್ವಚ್ಛತೆ, ಅಲಂಕಾರ, ಮೆರವಣಿಗೆ, ಸಾಂಸ್ಕöÈತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚೆ ನಡೆಯಿತು. ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆಗೆ ಒತ್ತು ನೀಡುವಂತೆ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಪ್ಲಕ್ಸ್ ಹಾಗೂ ಬ್ಯಾನರ್ ಅಳವಡಿಕೆ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಜಿಪಂ ಡಿಎಸ್ ಸಿ ಆರ್ ಮುಂಡರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಡಿವೈಎಸ್ಪಿ ಮಹಾಂತೇಶ್ ಸಜ್ಜನರ, ಸಹಾಯಕ ಆಯುಕ್ತ ಗಂಗಪ್ಪ ಎಂ., ಡಿಎಸ್ಡಬ್ಲು÷್ಯ ಡಾ. ನಂದಾ ಹಣಬರಟ್ಟಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ್ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಒಟ್ಟಾರೆ, ಈ ಬಾರಿ ಅಂಬೇಡ್ಕರ್ ಮತ್ತು ಜಗಜೀವನ ರಾಮ್ ಜಯಂತಿಯನ್ನು ಜನಜಾಗೃತಿ ಮತ್ತು ಸಮಾಜಸೇವೆ ಎರಡನ್ನೂ ಒಳಗೊಂಡ ಮಹತ್ವದ ಕಾರ್ಯಕ್ರಮವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande