
ಬೆಂಗಳೂರು, 28 ಫೆಬ್ರವರಿ (ಹಿ.ಸ.) :
ಆ್ಯಂಕರ್ : ವೀರ. ರಾಣಿ ಬೆಳವಾಡಿ ಮಲ್ಲಮ್ಮ, ಇವರು ಕನ್ನಡ ನೆಲದ ಶಕ್ತಿಯ ಪ್ರತೀಕ, ಜಗತ್ತಿನಲ್ಲೇ ಪ್ರಥಮ ಬಾರಿಗೆ ಪರಿಪೂರ್ಣ ಸೇನೆ ಕಟ್ಟಿ ಛತ್ರಪತಿ ಶಿವಾಜಿ ಸೈನ್ಯವನ್ನೇ ದಿಕ್ಕಾಪಾಲಾಗಿ ಓಡಿಸಿದ ವೀರಮಾತೆ.
ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ. ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಪರಾಕ್ರಮಕ್ಕೆ ಇನ್ನೊಂದು ಹೆಸರಾದ ಬೆಳವಡಿಯ ರಾಣಿ ಮಲ್ಲಮ್ಮಾಜಿಯದ್ದು ಸೋದೆ ಮನೆತನ.
ಸೋದೆಯ ರಾಜ ಮಧುಲಿಂಗ ನಾಯಕ. ಈತನ ಪತ್ನಿಯೇ ವೀರಮ್ಮಾಜಿ. ಸುಖ ಸಮೃದ್ಧಿ ನೆಲೆಸಿದ್ದ ಸೋದೆಯ ಮಧುಲಿಂಗ ದಂಪತಿಗೆ ಮಕ್ಕಳಾಗಿರಲಿಲ್ಲ. ನಂತರ ಸೊಪ್ಪಿ ಸಿದ್ಧಬಸವ ಎಂಬ ಮಹಾಯೋಗಿಯ ಸಲಹೆಯಂತೆ ವ್ರತಾಚರಣೆಯಿಂದ ಮಧುಲಿಂಗ ದಂಪತಿಗೆ ಜನಸಿದ ಮಗುವೇ ಮಲ್ಲಮ್ಮಾಜಿ.
ಲಾವಣ್ಯವತಿಯಾಗಿದ್ದ ಮಲ್ಲಮ್ಮಾಜಿ ಚಾಣಾಕ್ಷಳೂ, ಅಪಾರ ಬುದ್ಧಿವಂತೆಯೂ ಆಗಿದ್ದಳಲ್ಲದೆ ಅದ್ಭುತ ಮಾತುಗಾರ್ತಿಯೂ ಆಗಿದ್ದಳು.
ಮಲ್ಲಮ್ಮಾಜಿ ಯುದ್ಧಕಲೆಯಲ್ಲಿ ನಿಪುಣಳಾಗಿದ್ದಳು. ಯುದ್ಧರಂಗಕ್ಕಿಳಿದರೆ ರಣಚಂಡಿಯಂತೆ ಹೋರಾಡುತ್ತಿದ್ದಳು. ಮಹಾನ್ ಹರಭಕ್ತೆಯಾಗಿದ್ದಳು,
ಹರಪೂಜೆ ಗುರುಸೇವೆ ಮಾಡದೆ ಹನಿ ನೀರನ್ನೂ ಸೇವಿಸುತ್ತಿರಲಿಲ್ಲ. ಅಂಥ ಹರಭಕ್ತೆಗೆ ಹದಿನಾರು ತುಂಬಿದಾಗ ಬೆಳವಡಿಯ ರಾಜಕುಮಾರ ಈಶಪ್ರಭು ದೇಸಾಯಿಯೊಂದಿಗೆ ಮದುವೆ ಮಾಡಲಾಗುತ್ತದೆ.
ಈಶಪ್ರಭು ಎಂಥ ಪರಾಕ್ರಮಿ ಎಂದರೆ 21 ಹುಲಿಗಳನ್ನು ಬೇಟೆಯಾಡಿ ಸಂಸ್ಥಾನದಲ್ಲಿ ಹೆಬ್ಬುಲಿ ಎನಿಸಿಕೊಂಡಿದ್ದವ.
ಮಲ್ಲಮ್ಮಾಜಿಯನ್ನ ಈಶಪ್ರಭು ಯಾಕೆ ಮೆಚ್ಚಿಕೊಂಡನೆಂದರೆ ಆಕೆಯೂ ಹುಲಿಬೇಟೆಯಲ್ಲಿ ನಿಪುಣಳು.
ಎಷ್ಟೋ ಕಾಲದ ನಂತರ ಮಲ್ಲಮ್ಮಾಜಿ ತನ್ನ ಅರವತ್ತೇಳನೇ ವಯಸ್ಸಿನಲ್ಲಿ ಅಂದರೆ ಕ್ರಿಸ್ತಶಕ ಫೆಬ್ರುವರಿ 19, 1717ರಲ್ಲಿ ಲಿಂಗೈಕ್ಯಳಾಗುತ್ತಾಳೆ.
ಜಗತ್ತಿನ ಮೊದಲ ಮಹಿಳಾ ಸೈನ್ಯವನ್ನು ಕಟ್ಟಿದ ಮಲ್ಲಮ್ಮಾಜಿ, ಶಾಸ್ತ್ರ ಸಂಪ್ರದಾಯಗಳಲ್ಲೇ ಮುಳುಗೇಳುತ್ತಿದ್ದ ಆಗಿನ ತಾಯಂದಿರ ಕೈಯಲ್ಲಿ ಶಸ್ತ್ರ ಶಕ್ತಿಯನ್ನು ತುಂಬಿದ ಛಲಗಾತಿಯಾಗಿದ್ದಳು.
ಆಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯದ ಕೊಂಡಿಯಾಗಿದ್ದಳು. ಸ್ವರಾಜ್ಯ, ರಾಷ್ಟ್ರ ನಿರ್ಮಾಣ ಅವಳ ಗುರಿಯಾಗಿತ್ತು. ಫೆಬ್ರುವರಿ 28, 2026ರಂದು ವೀರಮಾತೆ ಬೆಳವಡಿ ರಾಣಿ ಮಲ್ಲಮ್ಮಾಜಿಯ 378ನೇ ವಿಜಯೋತ್ಸವ ದಿನ. ಆಕೆಯನ್ನು ಸ್ಮರಿಸಿಕೊಳ್ಳುವುದೇ ನಮ್ಮ ನಾಡಿಗೆ ದೊಡ್ಡ ಹೆಮ್ಮೆಯ
ವಿಷಯ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ