ಅಭಿವೃದ್ಧಿ ಕಾರ್ಯಗಳಿಂದ ತೃಪ್ತಿ: ಎಂ.ಕೆ. ತಾಜ್ಪೀರ್
ಚಿತ್ರದುರ್ಗ, 27 ಫೆಬ್ರವರಿ (ಹಿ.ಸ.): ಆ್ಯಂಕರ್: ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡು ವರ್ಷದ ಅಧಿಕಾರಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ತೃಪ್ತಿ ತಂದಿವೆ ಎಂದು ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಾನವನಗಳ ಮೂಲಸೌಕ
ಅಭಿವೃದ್ಧಿ ಕಾರ್ಯಗಳಿಂದ ತೃಪ್ತಿ: ಎಂ.ಕೆ. ತಾಜ್ಪೀರ್


ಚಿತ್ರದುರ್ಗ, 27 ಫೆಬ್ರವರಿ (ಹಿ.ಸ.):

ಆ್ಯಂಕರ್:

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡು ವರ್ಷದ ಅಧಿಕಾರಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ತೃಪ್ತಿ ತಂದಿವೆ ಎಂದು ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಾನವನಗಳ ಮೂಲಸೌಕರ್ಯ ಅಭಿವೃದ್ಧಿ, ಮಕ್ಕಳ ಆಟಿಕೆಗಳ ಅಳವಡಿಕೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಸುಮಾರು ₹1.75 ಕೋಟಿ ವೆಚ್ಚದಲ್ಲಿ ಕೆಳಗೋಟೆ ಚನ್ನಕೇಶವ ಉದ್ಯಾನವನ, ಗಾಂಧಿನಗರ, ಪಿಳ್ಳೆಕೆರೆನಹಳ್ಳಿ, ವಿದ್ಯಾನಗರ ಹಾಗೂ ಓಎಂಸಿ ಬಡಾವಣೆಗಳಲ್ಲಿ ಉದ್ಯಾನ ಅಭಿವೃದ್ಧಿ, ಕಾಂಕ್ರೀಟ್ ರಸ್ತೆ ಮತ್ತು ಅಲಂಕಾರಿಕ ದೀಪಗಳ ಅಳವಡಿಕೆ ಪೂರ್ಣಗೊಂಡಿದೆ. ತಿಮ್ಮಣ್ಣನಾಯಕನ ಕೆರೆಯ ಏರಿಯ ಮೇಲೆ ಪಾದಚಾರಿ ಮಾರ್ಗ ಮತ್ತು ಎಲ್‌ಇಡಿ ದೀಪಗಳ ವ್ಯವಸ್ಥೆ ಮಾಡಲಾಗಿದೆ.

ಗಾಂಧಿನಗರ, ರಾಮದೇವರ ವಡ್ಡು ಮತ್ತು ತಿಮ್ಮಣ್ಣನಾಯಕ ಕೆರೆಯ ಬಳಿ ₹75 ಲಕ್ಷ ವೆಚ್ಚದಲ್ಲಿ ಬಯಲು ಜಿಮ್ ಹಾಗೂ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಕೆಂಚಪ್ಪಸ್ವಾಮಿ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿ ಹಾಗೂ ಹಳೇ ಮಾಧ್ಯಮಿಕ ಶಾಲೆಯಲ್ಲಿ ₹45 ಲಕ್ಷ ವೆಚ್ಚದಲ್ಲಿ 500 ಜನರಿಗೆ ಆಸನ ವ್ಯವಸ್ಥೆಯ ಪೆವಿಲಿಯನ್ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ ಕೆನೋಪಿ ಅಳವಡಿಕೆ ಕಾರ್ಯ ಶೀಘ್ರ ಆರಂಭವಾಗಲಿದೆ.

2025-26ನೇ ಸಾಲಿನಲ್ಲಿ ₹2.50 ಕೋಟಿ ವೆಚ್ಚದ ಕಾಮಗಾರಿಗಳು ಮೆದೇಹಳ್ಳಿ, ಕೆಳಗೋಟೆ, ಪಿಳ್ಳೆಕೆರೆನಹಳ್ಳಿ ಹಾಗೂ ಎಂ.ಕೆ.ಹಟ್ಟಿ ಗ್ರಾಮಗಳಲ್ಲಿ ಪ್ರಗತಿಯಲ್ಲಿವೆ. ಬಿವಿಕೆಎಸ್, ನಿಜಲಿಂಗಪ್ಪ ಉದ್ಯಾನವನ, ಹೌಸಿಂಗ್ ಬೋರ್ಡ್ ಕಾಲೋನಿ ಸೇರಿದಂತೆ ವಿವಿಧೆಡೆ ಜಿಮ್ ಉಪಕರಣಗಳಿಗೆ ₹1 ಕೋಟಿ ಮೀಸಲಿಡಲಾಗಿದೆ. ಕಿರುಬನಕಲ್ಲು ಮತ್ತು ಮೆದೇಹಳ್ಳಿಯಲ್ಲಿ ಹೊಸ ಉದ್ಯಾನ ನಿರ್ಮಾಣಕ್ಕೆ ₹1.10 ಕೋಟಿ ಅನುಮೋದನೆ ದೊರೆತಿದೆ.

ಮುರುಘಾಮಠದ ಮುಂಭಾಗದ ಕೆರೆಯ ಅಭಿವೃದ್ಧಿಗೆ ಇದ್ದ ತಡೆಯಾಜ್ಞೆ ತೆರವುಗೊಂಡಿದ್ದು, ₹5 ಕೋಟಿ ವೆಚ್ಚದ ಮೊದಲ ಹಂತದ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದ ₹2.27 ಕೋಟಿ ಕಾಮಗಾರಿ ಟೆಂಡರ್ ಹಂತದಲ್ಲಿದೆ. ನಗರಸಭೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 15–20 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ನಗರದ ಹೊಸ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ನಗರಾಭಿವೃದ್ಧಿ ಸಚಿವ B. A. Suresh ಅವರ ಅಂತಿಮ ಅನುಮೋದನೆ ಬಾಕಿಯಿದೆ. ಮಾಸ್ಟರ್ ಪ್ಲಾನ್ ಜಾರಿಗೆ ಬಂದರೆ ಐತಿಹಾಸಿಕ ಕೋಟೆಗೆ ರಿಂಗ್‌ರೋಡ್ ಸಂಪರ್ಕ ಕಲ್ಪಿಸುವ ಯೋಜನೆ ಇದೆ ಎಂದು ತಾಜ್‌ಪೀರ್ ತಿಳಿಸಿದರು.

ಅಭಿವೃದ್ಧಿ ಕಾರ್ಯಗಳನ್ನು ಉಳಿಸಿ ಕಾಪಾಡುವುದು ಸಾರ್ವಜನಿಕರ ಜವಾಬ್ದಾರಿಯೂ ಆಗಿದ್ದು, ಪಾರ್ಕ್‌ಗಳ ಸ್ವಚ್ಛತೆ ಹಾಗೂ ಗಿಡಗಳ ಸಂರಕ್ಷಣೆಗೆ ನಾಗರಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande