
ನವದೆಹಲಿ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಸಂಜಯ್ ಕರೋಲ್ ಅವರ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿ, ಪ್ರಕರಣದ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡಿದ್ದು, ಈ ಹಂತದಲ್ಲಿ ಸಾಕ್ಷ್ಯ ನಾಶ ಅಥವಾ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು. ಇತರ ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿರುವುದನ್ನೂ ಅವರು ಉಲ್ಲೇಖಿಸಿದರು.
ಪ್ರತಿವಾದ ಆಲಿಸಿದ ನ್ಯಾಯಾಲಯ, ಕುಲಕರ್ಣಿ ಪ್ರಮುಖ ಆರೋಪಿ ಆಗಿದ್ದರೂ ಸಾಕ್ಷ್ಯಗಳ ವಿಚಾರಣೆ ಮುಗಿದಿರುವ ಹಿನ್ನೆಲೆ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಮುಂದಿನ ಎರಡು ತಿಂಗಳಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.
ಇದಕ್ಕೆ ಕೇಂದ್ರ ತನಿಖಾ ದಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಮತ್ತೊಂದು ಪ್ರಕರಣದಲ್ಲೂ ಕುಲಕರ್ಣಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರೂ, ಸುಪ್ರೀಂ ಕೋರ್ಟ್ ಆಕ್ಷೇಪವನ್ನು ಪರಿಗಣಿಸಲಿಲ್ಲ.
2016ರ ಜೂನ್ 15ರಂದು ಯೋಗೀಶ್ ಗೌಡರ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಸ್ಥಳೀಯ ಪೊಲೀಸರ ತನಿಖೆಯ ಬಳಿಕ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಈ ಹಿಂದೆ ಜಾಮೀನು ರದ್ದುಪಡಿಸಿದ ನಂತರ, 2025ರ ಜೂನ್ 13ರಿಂದ ಕುಲಕರ್ಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿರುವುದರಿಂದ ಬಿಡುಗಡೆಯ ದಾರಿ ಸುಗಮವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa