

ಹುಬ್ಬಳ್ಳಿ, 27 ಫೆಬ್ರವರಿ (ಹಿ.ಸ.):
ಆ್ಯಂಕರ್:
ರಣಜಿ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡ ಐತಿಹಾಸಿಕ ಗೆಲುವಿನ ಅಂಚಿನಲ್ಲಿದ್ದು, ಕರ್ನಾಟಕ ವಿರುದ್ಧ 477 ರನ್ಗಳ ಭಾರೀ ಮುನ್ನಡೆ ಪಡೆದುಕೊಂಡಿದೆ. ಕೊನೆಯ ದಿನ ಪವಾಡವೇ ನಡೆದರೆ ಮಾತ್ರ ಕರ್ನಾಟಕ ಚಾಂಪಿಯನ್ ಆಗುವ ಸಾಧ್ಯತೆ ಇದೆ.
ಮೂರನೇ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದ್ದ ಕರ್ನಾಟಕ, ನಾಲ್ಕನೇ ದಿನ 73 ರನ್ ಮಾತ್ರ ಸೇರಿಸಿ 93.3 ಓವರ್ಗಳಲ್ಲಿ 293 ರನ್ಗಳಿಗೆ ಆಲೌಟ್ ಆಯಿತು. ನಿನ್ನೆ ಅಜೇಯರಾಗಿದ್ದ ಮಯಾಂಕ್ ಅಗರ್ವಾಲ್ 160 ರನ್ಗಳ ಅದ್ಭುತ ಇನಿಂಗ್ಸ್ ಆಡಿದರು. ಕೃತಿಕ್ ಕೃಷ್ಣ 36 ರನ್ ಗಳಿಸಿದರೆ, ವಿಜಯ್ ಕುಮಾರ್ ವೈಶಾಕ್ ಅಜೇಯ 17 ರನ್ ಗಳಿಸಿದರು.
ಮೊದಲ ಇನ್ನಿಂಗ್ಸ್ನಲ್ಲಿ 291 ರನ್ ಮುನ್ನಡೆ ಪಡೆದಿದ್ದ ಜಮ್ಮು ಕಾಶ್ಮೀರ ತಂಡ, ಎರಡನೇ ಇನ್ನಿಂಗ್ಸ್ನಲ್ಲಿ 57 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿದೆ. ಖಮ್ರಾನ್ ಇಕ್ಬಾಲ್ ಅಜೇಯ 94 ರನ್ ಗಳಿಸಿ ಶತಕದತ್ತ ಮುನ್ನಡೆಯುತ್ತಿದ್ದರೆ, ಅಬ್ದುಲ್ ಸಮಾದ್ 32 ರನ್ ಗಳಿಸಿದರು. ಸಾಹಿಲ್ ಲೂತ್ರಾ 16 ರನ್ಗಳೊಂದಿಗೆ ಕ್ರೀಸ್ನಲ್ಲಿದ್ದಾರೆ.
ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರೆ, ವಿಜಯ್ ಕುಮಾರ್ ವೈಶಾಕ್ ಮತ್ತು ಶ್ರೇಯಾಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇದೀಗ ಜಮ್ಮು ಕಾಶ್ಮೀರ ಒಟ್ಟು 477 ರನ್ ಮುನ್ನಡೆ ಸಾಧಿಸಿದ್ದು, ಕೊನೆಯ ದಿನ ಅವರನ್ನು ಬೇಗ ಆಲೌಟ್ ಮಾಡಿ ಏಕದಿನ ಶೈಲಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದರೆ ಮಾತ್ರ ಕರ್ನಾಟಕಕ್ಕೆ ಜಯದ ಆಸೆ ಜೀವಂತವಾಗಲಿದೆ. ಇಲ್ಲವಾದರೆ ಪಂದ್ಯ ಡ್ರಾ ಆದರೂ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಜಮ್ಮು ಕಾಶ್ಮೀರ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.
ಚೊಚ್ಚಲ ರಣಜಿ ಕಿರೀಟದ ನಿರೀಕ್ಷೆಯಲ್ಲಿರುವ ಜಮ್ಮು ಕಾಶ್ಮೀರ ತಂಡವನ್ನು ಹುರಿದುಂಬಿಸಲು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ವಿಮಾನದಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡು, ಫೈನಲ್ ತಲುಪಿದ ತಂಡದ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿರುವ ಅವರು, ಕೊನೆಯ ದಿನ ಮೈದಾನದಲ್ಲಿ ಕುಳಿತು ಆಟಗಾರರನ್ನು ಹುರಿದುಂಬಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa