
ಮೈಸೂರು, 27 ಫೆಬ್ರವರಿ (ಹಿ.ಸ.):
ಆ್ಯಂಕರ್:
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕೆಎಸ್‌ಐಸಿ ಫಿಲೇಚರ್ ಕಾರ್ಖಾನೆ ಆವರಣದಲ್ಲಿರುವ 6 ಎಕರೆ 8 ಗುಂಟೆ ಜಾಗವನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ಕ್ರೀಡಾಂಗಣ ನಿರ್ಮಾಣಕ್ಕಾಗಿ ಹಸ್ತಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ ಭಾಗವಹಿಸಿ ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ಅವರು, ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ರೇಷ್ಮೆ ಕಾರ್ಖಾನೆ ಘಟಕವು ನಾಡಿನ ಐತಿಹಾಸಿಕ ಹಾಗೂ ಪಾರಂಪರಿಕ ಸಂಸ್ಥೆಯಾಗಿದ್ದು, ಸಾವಿರಾರು ಕಾರ್ಮಿಕರಿಗೆ ಜೀವನೋಪಾಯ ಒದಗಿಸುತ್ತಿದೆ. ಮೈಸೂರು ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದ ಹೆಮ್ಮೆಯ ಪ್ರತಿಷ್ಠಾನವಾಗಿರುವ ಈ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕ್ರೀಡಾಂಗಣ ನಿರ್ಮಾಣಕ್ಕೆ ಪರ್ಯಾಯ ಸ್ಥಳವನ್ನು ಗುರುತಿಸಬೇಕು ಕಾರ್ಖಾನೆಯ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಲಿದೆ ಎಂದು ಅವರು ಎಚ್ಚರಿಸಿದರು. ಕಾರ್ಮಿಕರ ಉದ್ಯೋಗ ಭದ್ರತೆ ಮತ್ತು ಸಂಸ್ಥೆಯ ಸಂರಕ್ಷಣೆಗಾಗಿ ಸರ್ಕಾರವು ತಕ್ಷಣವೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa