
ಚಿತ್ರದುರ್ಗ, 27 ಫೆಬ್ರವರಿ (ಹಿ.ಸ.):
ಆ್ಯಂಕರ್:
ಬ್ಯಾಂಕುಗಳು ಸ್ವ-ಸಹಾಯ ಗುಂಪುಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಿ, ಇನ್ನಷ್ಟು ಅಭಿವೃದ್ಧಿ ಕಾರ್ಯನಿರ್ವಹಿಸಲು ಸಹಕರಿಸಬೇಕು ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಪಂಚಾಯತ್, ಜಿಲ್ಲಾ ಅಭಿನಯ ನಿರ್ವಹಣೆ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಸಹಾಯ ಗುಂಪುಗಳು ಗ್ರಾಮೀಣ ಪ್ರದೇಶದಲ್ಲಿ ತಮ್ಮದೇ ಆದ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳುತ್ತವೆ. ಇದಕ್ಕೆ ಪೂರಕವಾಗಿ ಎನ್‍ಆರ್‍ಎಲ್‍ಎಂ ಯೋಜನೆಯಿಂದ ಸುಮಾರು ರೂ. 85 ಕೋಟಿ ಸಮುದಾಯ ಬಂಡವಾಳ ನಿಧಿಯನ್ನು ಒಕ್ಕೂಟಗಳಿಗೆ ನೀಡಲಾಗಿರುತ್ತದೆ. ಈ ಅನುದಾನವನ್ನು ಸಾಲವಾಗಿ ಬಳಸಿಕೊಂಡು ಸ್ವಸಹಾಯ ಗುಂಪಿನ ಸದಸ್ಯರು ಆದಾಯ ತನ್ನ ಚಟುವಟಿಕೆಯನ್ನು ಅನುಷ್ಠಾನ ಮಾಡುತ್ತಾ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆದಿದ್ದಾರೆ ಎಂದು ತಿಳಿಸಿದರು.
ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಸ್ವಸಹಾಯ ಗುಂಪುಗಳು ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ತನ್ನದೇ ಕೊಡುಗೆಯನ್ನು ನೀಡಿರುತ್ತವೆ. ಅವರು ಕೈಗೊಳ್ಳುವ ಚಟುವಟಿಕೆಗಳಿಗೆ ಬ್ಯಾಂಕುಗಳು ಹೆಚ್ಚಿನ ಪ್ರೋತ್ಸಾಹ ನೀಡುವಂತೆ ತಿಳಿಸಿದರು.
ಯೋಜನಾ ನಿರ್ದೇಶಕರಾದ ಜಯಲಕ್ಷ್ಮಿ ಮಾತನಾಡಿ ಪಿಎಂಜೆಜೆಬಿಐ ಮತ್ತು ಪಿಎಂಎಸ್‍ಬಿವೈ ನಂತಹ ಇನ್ಸೂರೆನ್ಸ್‍ಗಳನ್ನು ಸ್ವಸಹಾಯ ಗುಂಪುಗಳ ಸದಸ್ಯರಿಗೆ ಕಲ್ಪಿಸಲು ಬ್ಯಾಂಕುಗಳಿಗೆ ಸಹಕರಿಸಲು ಕೋರಿದರು. ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ಸಂಪರ್ಕ ಕಲ್ಪಿಸಲು ಅವಶ್ಯಕ ಮಾರ್ಗದರ್ಶನ ನೀಡಿ ಪ್ರಗತಿ ಸಾಧಿಸಲು ಬ್ಯಾಂಕುಗಳಿಗೆ ತಿಳಿಸಿದರು.
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಯೋಗೇಶ್ವರಪ್ಪ ಕಾರ್ಯಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ದೀಕ್ಷಿತ್, ಎನ್‍ಆರ್‍ಎಲ್‍ಎಂ ಜಿಲ್ಲಾ ಮತ್ತು ತಾಲೂಕು ಸಿಬ್ಬಂದಿಗಳು ಹಾಗೂ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa