
ಬೆಂಗಳೂರು, 27 ಫೆಬ್ರವರಿ (ಹಿ.ಸ.):
ಆ್ಯಂಕರ್:ಚಿತ್ರದುರ್ಗ ನಗರದೊಳಗೆ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ 6.30 ಎಕರೆ ಭೂಮಿಯನ್ನು ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ತೋಟಗಾರಿಕೆ ಸಚಿವ ಎಸ್ಎಸ್.ಮಲ್ಲಿಕಾರ್ಜುನ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಜಂಟಿಯಾಗಿ ನಿರ್ಧಾರ ಕೈಗೊಂಡರು.
ಕುಂಚಿಗನಾಳು ಹತ್ತಿರ ನಿರ್ಮಿತವಾಗಿರುವ ಪ್ರಸ್ತುತ ಡಿಸಿ ಕಚೇರಿ ನಗರದಿಂದ ದೂರವಾಗಿರುವ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಆ ಕಟ್ಟಡವನ್ನು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿ, ನಗರದಲ್ಲಿಯೇ ಹೊಸ ಡಿಸಿ ಕಚೇರಿ ನಿರ್ಮಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ತೋಟಗಾರಿಕೆ ಇಲಾಖೆಯ 6.10 ಎಕರೆ ಹಾಗೂ ಹಾಪ್‌ಕಾಮ್ಸ್ ವ್ಯಾಪ್ತಿಯ 0.20 ಎಕರೆ ಸೇರಿ ಒಟ್ಟು 6.30 ಎಕರೆ ಜಮೀನನ್ನು ಡಿಸಿ ಕಚೇರಿಗೆ ಮೀಸಲಿಡಲು ಒಪ್ಪಿಗೆ ನೀಡಲಾಗಿದೆ. ಬದಲಾಗಿ ಹಿರೇಗುಂಟನೂರು ಹೋಬಳಿ ಚಿಕ್ಕಪುರ ಗ್ರಾಮದ ಸರ್ವೇ ನಂ. 96 ಮತ್ತು 101ರಲ್ಲಿ 20 ಎಕರೆ ಭೂಮಿಯನ್ನು ತೋಟಗಾರಿಕೆ ಇಲಾಖೆಗೆ ನೀಡಲು ತೀರ್ಮಾನಿಸಲಾಗಿದೆ. ಹೊಸ ಕಟ್ಟಡದಲ್ಲಿ ತೋಟಗಾರಿಕೆ ಇಲಾಖೆಗೆ ಸಹ ಸ್ಥಳಾವಕಾಶ ಕಲ್ಪಿಸಲಾಗುವುದು.
ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ, ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದರು
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa