
ಬೆಂಗಳೂರು, 27 ಫೆಬ್ರವರಿ (ಹಿ.ಸ.):
ಆ್ಯಂಕರ್:ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಕುರಿತು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವಂತೆ ನಬಾರ್ಡ್ ಮುಂದಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದರು.
ನಗರದ ನಬಾರ್ಡ್ ಪ್ರಾದೇಶಿಕ ಕಚೇರಿಯಲ್ಲಿ ನಬಾರ್ಡ್ ವತಿಯಿಂದ ಕೃಷಿ ಸಂಸ್ಕರಣೆಯಲ್ಲಿ ಮಹಿಳಾ ರೈತರು ಹಾಗೂ ಎಂಎಸ್ಎಂಇಗಳ ಬಲವರ್ಧನೆಗೆ ಸಮಗ್ರ ಸಾಲ ವ್ಯವಸ್ಥೆ ಕುರಿತಂತೆ ಆಯೋಜಿಸಿದ್ದ ರಾಜ್ಯ ಕ್ರೆಡಿಟ್ ಸೆಮಿನಾರ್–2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಗೆ ನಬಾರ್ಡ್ ನೀಡುತ್ತಿರುವ ಕೊಡುಗೆ ಅನನ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
1982ರಿಂದ ಕಾರ್ಯನಿರ್ವಹಿಸುತ್ತಿರುವ ನಬಾರ್ಡ್ ತನ್ನ ಗುರಿಗಳಲ್ಲಿ ಶೇ.99ರಷ್ಟು ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ, ರಸ್ತೆ ಹಾಗೂ ಹಣಕಾಸಿನ ನೆರವು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಬಾರ್ಡ್ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ನೋಡಿದ್ದೇವೆ. ಆರೋಗ್ಯ ಇಲಾಖೆಗೆ ಸಹ ನಬಾರ್ಡ್ ಮಹತ್ವದ ಅನುದಾನ ನೀಡುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮತ್ತು ಮೂಲಸೌಕರ್ಯ ವೃದ್ಧಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳತ್ತಲೂ ನಬಾರ್ಡ್ ಗಮನಹರಿಸಬೇಕು. ಗ್ರಾಮೀಣ ಜನತೆಗೆ ತಲುಪುವಂತೆ ವಿಶೇಷ ಅಭಿಯಾನಗಳನ್ನು ರೂಪಿಸಬೇಕು ಎಂದು ಅವರು ಸೂಚಿಸಿದರು. EKCC ತಂತ್ರಜ್ಞಾನ ಬಳಕೆ ಮೂಲಕ ನಬಾರ್ಡ್ ಪಾರದರ್ಶಕ ಕಾರ್ಯಪದ್ಧತಿಯನ್ನು ಅಳವಡಿಸಿಕೊಂಡಿದ್ದು, ರೈತರಿಗೆ ತ್ವರಿತವಾಗಿ ಸಾಲ ಸೌಲಭ್ಯ ದೊರಕುವಂತಾಗಿದೆ. ರಾಜ್ಯದ ಕಟ್ಟಕಡೆಯ ರೈತನಿಗೂ ಈ ಸೌಲಭ್ಯ ತಲುಪಬೇಕು ಎಂಬುದು ಸರ್ಕಾರದ ಆಶಯ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದ ಬಳಿಕ ಸಚಿವರು ಮಳಿಗೆಗಳನ್ನು ಉದ್ಘಾಟಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಬಾರ್ಡ್ ಸಹಾಯಧನದಿಂದ ಸಣ್ಣ ಉದ್ಯಮಗಳನ್ನು ನಡೆಸುತ್ತಿರುವ ಸಹಕಾರಿ ಸಂಘಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರ್ಬಿಐ ಜನರಲ್ ಮ್ಯಾನೇಜರ್ ಕಾರ್ತಿಕೇಯನ್, ಕೆನರಾ ಬ್ಯಾಂಕ್ ಎಂಡಿ ಭವೇಂದ್ರ ಕುಮಾರ್, ನಬಾರ್ಡ್ ಚೀಫ್ ಜನರಲ್ ಮ್ಯಾನೇಜರ್ ಸುರೇಂದ್ರ ಬಾಬು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa