


ಕೊಪ್ಪಳ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಪ್ರಸ್ತುತ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ದಕ್ಷತೆಯನ್ನು ಸಾಬೀತುಪಡಿಸುತ್ತಿದ್ದು, ಅವರಿಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಹಾಗೂ ಪ್ರಾಮುಖ್ಯತೆ ನೀಡುವುದು ನಮ್ಮೆಲ್ಲರ ಆದ್ಯತೆ ಆಗಬೇಕು ಎಂದು ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಹೇಳಿದರು.
ಶುಕ್ರವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ(ಬೇಟಿ ಬಚಾವೋ ಬೇಟಿ ಪಡಾವೋ) ಯೋಜನೆಯಡಿ ಸುಸ್ಥಿರ ಭವಿಷ್ಯಕ್ಕೆ ಹೆಣ್ಣುಮಕ್ಕಳ ಸಬಲೀಕರಣ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ-2026 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಪಿತೃ ಪ್ರಧಾನ ಸಮಾಜವಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಎನ್ನುವುದು ಇನ್ನೂ ಮರೀಚಿಕೆಯಾಗಿದೆ. ಆದರೆ ಹೆಣ್ಣು ಸ್ವಾವಲಂಬಿ ಹಾಗೂ ಸ್ವತಂತ್ರಳಾಗಬೇಕೆಂದರೆ ಮೊದಲು ಆಕೆಗೆ ಶಿಕ್ಷಣ ನೀಡಬೇಕು. ಪೋಷಕರ ಪ್ರಮುಖ ಜವಾಬ್ದಾರಿ ಅದು. ಹೆಣ್ಣುಮಕ್ಕಳ ಸಬಲೀಕರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಮಹತ್ವದ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳ ಸಮರ್ಪಕ ಅನುಷ್ಠಾನವಾಗಬೇಕು. 2029ಕ್ಕೆ ಸಂಸತ್ತಿನಲ್ಲಿ ಶೇ.33 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಯೋಜನೆಯಿದ್ದು, ಹಾಗೇನಾದರೂ ಆದಲ್ಲಿ ಮಹಿಳೆಯರು ರಾಜಕೀಯವಾಗಿಯೂ ಉನ್ನತ ಮಟ್ಟದ ಸಾಧನೆ ಮಾಡಬಲ್ಲರು. ಹೆಣ್ಣುಮಕ್ಕಳು ಹುಟ್ಟಿನಿಂದ ಜವಾಬ್ದಾರಿ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬರುತ್ತಾರೆ. ಅದು ಹೆಣ್ಣುಮಕ್ಕಳಿಗೆ ಪ್ರಕೃತಿದತ್ತವಾಗಿ ದೊರೆತ ವರ. ಅದರೊಂದಿಗೆ ಪೋಷಕರು ಸಾಮಾಜಿಕ ಮೌಲ್ಯಗಳು, ಶಿಕ್ಷಣ, ಧೈರ್ಯ, ಛಲವನ್ನು ರೂಢಿಸಬೇಕು. ಹೆಣ್ಣು ಒಂಟಿಯಾಗಿಯೂ ಏನು ಬೇಕಾದರೂ ಸಾಧಿಸಬಲ್ಲಳು, ಎದುರಿಸಬಲ್ಲಳು ಎಂಬುದನ್ನು ಕಲಿಸಬೇಕು. ಸಹಜವಾಗಿ ಹೆಣ್ಣು ಮಕ್ಕಳಿಗೆ ಯಾವುದೇ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಿರುತ್ತದೆ. ಆ ಗುಣವನ್ನು ಮಹಿಳೆಯರು ತಮ್ಮ ವೃತ್ತಿ ಬದುಕಿನ ಉನ್ನತಿಗೆ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ವಿ.ಗಡಾದ್ ಮಾತನಾಡಿ, ಹೆಣ್ಣುಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ಸರ್ಕಾರದಿಂದ ಇರುವ ಹಲವಾರು ಕಾರ್ಯಕ್ರಮಗಳನ್ನು ಬಳಸಿಕೊಂಡು ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರೋತ್ಸಾಹಿಸಬೇಕು. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಶ್ರೇಷ್ಠವಾದ ಸ್ಥಾನ ನೀಡಿದ್ದೇವೆ. ಅದನ್ನು ಗೌರವಿಸುವಂತೆ ಗಂಡುಮಗುವಿಗೂ ತಿಳುವಳಿಕೆ ನೀಡಬೇಕು. ಸದೃಢ ಆರೋಗ್ಯ, ಪೌಷ್ಠಿಕ ಆಹಾರ ಪ್ರತಿ ಮಗುವಿನ ಹಕ್ಕು. ಪೋಷಕರು ಅದನ್ನು ಒದಗಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಮಾತನಾಡಿ, ಇಂದು ಹೆಣ್ಣುಮಕ್ಕಳು ಕಾರ್ಯನಿರ್ವಹಿಸದ ಕ್ಷೇತ್ರಗಳಿಲ್ಲ. ಇತ್ತೀಚೆಗೆ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸ್ಥಾನ ಪಡೆದಿದ್ದಾರೆ. ಇದು ಆಶಾದಾಯಕ ಸಂಗತಿ. ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು. ವೃತ್ತಿ ಆಧಾರಿತ ಕೌಶಲ್ಯಗಳ ಬಗಗೆ ಹೆಚ್ಚಿನ ತರಬೇತಿ ನೀಡಬೇಕು. ಆರ್ಥಿಕ ಸ್ವಾತಂತ್ರ್ಯ ಮಹಿಳೆಯಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಂವಿಧಾನದ ಕಲಂ 15(4) ಮತ್ತು 16(4) ರನ್ವಯ ಮಹಿಳೆಯರ ಶಿಕ್ಷಣ, ಸಮಾನತೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆ, ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಮನೆಯಲ್ಲಿ ಗಂಡು ಮಕ್ಕಳಿಗೆ ನೀಡುವ ಪ್ರಾಮುಖ್ಯತೆಯನ್ನು ಹೆಣ್ಣು ಮಕ್ಕಳಿಗೂ ನೀಡಬೇಕು. ಆತ್ಮವಿಶ್ವಾಸದಿಂದ ಮುನ್ನುಗ್ಗುವ ಧೈರ್ಯವನ್ನು ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ನೀಡಬೇಕು ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರದ ಬಾಲಕಿಯರ ಬಾಲಮಂದಿರದ ಮಕ್ಕಳು ಯೋಗ ನೃತ್ಯ ಪ್ರದರ್ಶಿಸಿದರು. ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಮಹನೀಯರ ಛದ್ಮವೇಷವನ್ನು ಧರಿಸಿ ಮಕ್ಕಳು ಸಂಭ್ರಮಿಸಿದರು.
ಕಾರ್ಯಕ್ರದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭ ಪೋಷಣ್ ಅಭಿಯಾನದಡಿ ಕ್ಯಾಲೆಂಡರ್ ಬಿಡುಗಡೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಕುರಿತ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್