
ಧಾರವಾಡ, 27 ಫೆಬ್ರವರಿ (ಹಿ.ಸ.):
ಆ್ಯಂಕರ್:
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ವಿಶೇಷ ಚೇತನರು ಹಾಗೂ ದಿವ್ಯಾಂಗ ಮಕ್ಕಳಿಗಾಗಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಿತು.
ಶಿಕ್ಷಕಿಯರ ಸರ್ಕಾರಿ ತರಬೇತಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಜಿಲ್ಲೆಯ ಎಲ್ಲಾ ವಿಶೇಷ ಚೇತನ ಮಕ್ಕಳ ಸಮೀಕ್ಷೆ ಕೈಗೊಂಡಿದ್ದು, ಅವರಿಗೆ ಅಗತ್ಯ ಉಪಕರಣಗಳು ಹಾಗೂ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ ಎಂದರು. ವಿಶೇಷ ಚೇತನರನ್ನು ಸಂರಕ್ಷಿಸುವ ಕುಟುಂಬಗಳಿಗೂ ಸರ್ಕಾರದ ನಿಯಮಾನುಸಾರ ನೆರವು ನೀಡಲಾಗುವುದು ಎಂದು ಹೇಳಿದರು.
ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ವ್ಹೀಲ್‌ಚೇರ್, ಆಟಿಕೆ ಸಾಮಾನು, ಹಣ್ಣು ಹಾಗೂ ಧಾನ್ಯದ ಕಿಟ್‌ಗಳು ಸೇರಿದಂತೆ ವಿವಿಧ ಉಪಕರಣಗಳನ್ನು ವಿತರಿಸಲಾಯಿತು. ಧಾರವಾಡ, ಹುಬ್ಬಳ್ಳಿ ಹಾಗೂ ಕಲಘಟಗಿ ಪ್ರದೇಶಗಳಲ್ಲಿ ಒಟ್ಟು 20 ವ್ಹೀಲ್‌ಚೇರ್, 100 ಫಿಜಿಯೋಥೆರಪಿ ಬಾಲ್, 50 ತೂಕದ ಸಾಧನಗಳು ಸೇರಿದಂತೆ ಸುಮಾರು ₹10 ಲಕ್ಷ ಮೌಲ್ಯದ ಸಾಧನಗಳನ್ನು ನೀಡಲಾಯಿತು.
ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ ಮಾತನಾಡಿ, ವಿಶೇಷ ಚೇತನರಿಗೆ ಸರ್ಕಾರದ ಜೊತೆಗೆ ಸಮಾಜದ ಬೆಂಬಲವೂ ಅಗತ್ಯವಾಗಿದೆ. ಅವರಲ್ಲಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜಮುಖಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa