
ಕೋಲಾರ, ೨೫ ಫೆಬ್ರವರಿ (ಹಿ.ಸ) :
ಆ್ಯಂಕರ್ : ರಾಷ್ಟ್ರದ ಮಹತ್ವಾಕಾಂಕ್ಷಿ ಯೋಜನೆಯಾದ 'ಡಿಜಿಟಲ್ ಜನಗಣತಿ-೨೦೨೭' ಅನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಿ ಯಶಸ್ವಿಗೊಳಿಸಲು ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ಆರ್.ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಬುಧವಾರ ಜನಗಣತಿಗೆ ನಿಯೋಜತ ಚಾರ್ಜ್ ಅಧಿಕಾರಿಗಳಿಗಾಗಿ ಮೂರು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಧಿಕಾರಿಗಳಿಗೆ ಜನಗಣತಿಯ ಗಂಭೀರತೆ ಮತ್ತು ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಈ ಬಾರಿಯ ಡಿಜಿಟಲ್ ಜನಗಣತಿಯು ಈ ಹಿಂದಿನ ಪದ್ಧತಿಗಳಿಗಿಂತ ಭಿನ್ನವಾಗಿದ್ದು, ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
೨೦೧೧ರ ಜನಗಣತಿಯಲ್ಲಿ ಕಾಗದದ ಫಾರ್ಮ್ಗಳನ್ನು ಬಳಸಲಾಗುತ್ತಿತ್ತು. ಆದರೆ ೨೦೨೭ರ ಜನಗಣತಿಯಲ್ಲಿ ಹೆಚ್.ಎಲ್.ಒ ಮೊಬೈಲ್ ಆಪ್' ಮತ್ತು ಸಿಸಿಎಂಎಸ್ ಪೋರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ದತ್ತಾಂಶ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಮಾಹಿತಿಯು ತಕ್ಷಣವೇ ಆನ್ಲೈನ್ನಲ್ಲಿ ಸ್ಟೋರ್ ಆಗಲಿದ್ದು, ದೋಷಗಳಿಗೆ ಅವಕಾಶವಿರುವುದಿಲ್ಲ. ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳ ರೂಪಿಸುವಿಕೆಗೆ ಪೂರಕವಾದ ದತ್ತಾಂಶ ಒದಗಿಸುವ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದರು.
ತರಬೇತಿ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದ ಮತ್ತು ನಿರ್ಲಕ್ಷ್ಯ ತೋರಿದ ತಹಶೀಲ್ದಾರ್ ಹಾಗೂ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಯಾವುದೇ ಸಬೂಬುಗಳನ್ನು ಸಹಿಸಲಾಗುವುದಿಲ್ಲ. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಿ ವರದಿ ನೀಡಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ತರಬೇತಿ ಮೊದಲ ದಿನ ಜನಗಣತಿಯ ಕಾನೂನು ನಿಬಂಧನೆಗಳು, ನಿಧಿ ನಿರ್ವಹಣೆ ಮತ್ತು ಸಿಸಿಎಂಎಸ್ ಪೋರ್ಟಲ್ ಪರಿಚಯ. ಎರಡನೇ ದಿನ ಗ್ರಾಮ/ನಗರಗಳ ರಿಜಿಸ್ಟರ್ ಸಿದ್ಧಪಡಿಸುವಿಕೆ, ಲೇಔಟ್ ನಕ್ಷೆ ತಯಾರಿ ಮತ್ತು ನೇಮಕಾತಿ ಪತ್ರಗಳ ನಿರ್ವಹಣೆ. ಮೂರನೇ ದಿನ ಮೊಬೈಲ್ ಆಪ್ ಮೂಲಕ ಮಾಹಿತಿ ಭರ್ತಿ ಮಾಡುವ ವಿಧಾನ, ದತ್ತಾಂಶದ ಗೌಪ್ಯತೆ ಮತ್ತು ಸುರಕ್ಷತೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಎಂದು ಅವರು ಮಾಹಿತಿ ನೀಡಿದರು.
ಈ ಜನಗಣತಿ-೨೦೨೭ರಲ್ಲಿ ಸಿಬ್ಬಂದಿ ಮನೆಯಿಂದ ಮನೆಗೆ ತೆರಳಿ ಮಾಹಿತಿ ಸಂಗ್ರಹಣ ಮಾಡುತ್ತಾರೆ. ಈ ಜನಗಣತಿಯ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ತಲಾದಾಯ ತಿಳಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ಮತ್ತು ಜಿಲ್ಲಾ ಜನಗಣತಿ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್ಗಳು ಹಾಗೂ ಯುಎಲ್ಬಿ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ : ಮುಂದಿನ ವರ್ಷ ನಡೆಯಲಿರುವ ಡಿಜಿಟಲ್ ಜನಗಣತಿಯ ತರಬೇತಿಯನ್ನು ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್