


ಕೊಪ್ಪಳ, 25 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕಾರ್ಖಾನೆಗಳ ಮಾಲಿನ್ಯದಿಂದ ನಲುಗುತ್ತಿರುವ ಹಳ್ಳಿಗಳ ಕಳವಳದ ನಡುವೆ, ಎಂಟು ವರ್ಷದ ಬಾಲಕನೊಬ್ಬ ಸಮಾಜದ ಗಮನ ಸೆಳೆದಿದ್ದಾನೆ.
ಕೊಪ್ಪಳದ ಹರ್ಷರಾಜ್ ಎಂ ಕಟ್ಟಿಮನಿ ಎಂಬ ಬಾಲಕ 2ನೇ ತರಗತಿ, ಪಿ ಎಮ್ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು ತನ್ನ ಚಿಕ್ಕ ವಯಸ್ಸಿನಲ್ಲೇ ಪರಿಸರ ಜಾಗೃತಿಗೆ ಕೈಜೋಡಿಸಿರುವುದು ಗಮನಾರ್ಹ.
ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳು ಕಾರ್ಖಾನೆಗಳ ಕಪ್ಪು ಹೊಗೆ ಮತ್ತು ಧೂಳಿನಿಂದ ಸಂಕಷ್ಟ ಅನುಭವಿಸುತ್ತಿವೆ. ಬೆಳೆ ಹಾನಿ, ಕುಡಿಯುವ ನೀರಿನ ಕಲುಷಿತತೆ, ಜನರಲ್ಲಿ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಮಕ್ಕಳಲ್ಲಿ ಉಸಿರಾಟದ ತೊಂದರೆಗಳು ಹೆಚ್ಚುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ನಡೆದ ಕೊಪ್ಪಳ ಬಂದ್ ವೇಳೆ, ಹರ್ಷರಾಜ ನೆಬುಲೈಜೇಷನ್ ಸಹಾಯದಿಂದಲೇ ಪುಟ್ಟ ಸೈಕಲ್ ಏರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾನೆ.
ಕಲುಷಿತ ನೀರಿನ ಬಾಟಲ್ ನೊಂದಿಗೆ ಸಾವಿರಾರು ಜನರ ನಡುವೆ ಮೌನವಾಗಿ ನಿಂತಿದ್ದ ಆ ಬಾಲಕನ ಹಾಜರಾತಿ ಅನೇಕರ ಗಮನ ಸೆಳೆದಿತು.
ಘೋಷಣೆ ಕೂಗುವ ವಯಸ್ಸು ಅವನಿಗಿರಲಿಲ್ಲವಾದರೂ, ಪರಿಸರದ ಬಗ್ಗೆ ಇರುವ ಅವನ ಕಳಕಳಿ ಮತ್ತು ಜವಾಬ್ದಾರಿತನ ದೊಡ್ಡವರಿಗೂ ಮಾದರಿಯಾಗಿದೆ. ಕಾರ್ಖಾನೆಗಳ ಮಾಲಿನ್ಯದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸ್ಥಳಕ್ಕೇ ತೆರಳಿ ವಿಡಿಯೋಗಳ ಮೂಲಕ ಧ್ವನಿ ಎತ್ತಿರುವುದು ವಿಶೇಷ.
ಹರ್ಷರಾಜನಂತಹ ಬಾಲಮನಗಳ ಜಾಗೃತಿ ಜನಪ್ರತಿನಿಧಿಗಳಿಗೂ ತಲುಪಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್