ಲೋಕಾಯುಕ್ತ ಪ್ರಕರಣ, ಬಂಜಾರ ಸಮುದಾಯದಿಂದ ಬೃಹತ್ ಪ್ರತಿಭಟನೆ
ಹಾಕಿ
ಫೋಟೋ


ಗದಗ, 25 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಐದು ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಂದ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅವರ ಅಭಿಮಾನಿ ಬಳಗ ಹಾಗೂ ಬಂಜಾರ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಯಿತು. “ನ್ಯಾಯ ಬೇಕು” ಎಂದು ಘೋಷಣೆ ಹಾಕಿದ ಪ್ರತಿಭಟನಾಕಾರರು, ಬಂಜಾರ ಸಮುದಾಯದ ಶಾಸಕರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಲನ್ನೂ ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ಪಟ್ಟಣದ ಸೋಮೇಶ್ವರ ದೇವಸ್ಥಾನದ ರಥದ ಮೈದಾನದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿಯ ಭಾವಚಿತ್ರ ಪ್ರದರ್ಶಿಸಿ, “ನಾವು ನಿಮ್ಮೊಂದಿಗಿದ್ದೇವೆ” ಎಂದು ಸಮುದಾಯದ ಬೆಂಬಲ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಪಕ್ಷದ ಪಕ್ಕಾ ಷಡ್ಯಂತ್ರವೆಂದು ಆರೋಪಿಸಿ, ಶಾಸಕರನ್ನು ಟ್ರ್ಯಾಪ್ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ನಡುವೆ, ಶಾಸಕರ ಮೇಲೆ ನಡೆದ ಲೋಕಾಯುಕ್ತ ದಾಳಿ ಬಳಿಕ ವೈರಲ್ ಆದ ಷಡ್ಯಂತ್ರ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸೋನು ಲಮಾಣಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿ ತಮ್ಮ ಹೆಸರನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದರು.

ಆದರಹಳ್ಳಿ ಕುಮಾರ ಮಹಾರಾಜರು ಮತ್ತು ಬಿಜೆಪಿ ಕಾರ್ಯಕರ್ತನ ನಡುವಿನ ಮಾತುಕಥೆಯಲ್ಲಿ ಶಾಸಕರನ್ನು ಟ್ರ್ಯಾಪ್ ಮಾಡಿಸುವುದಾಗಿ ಹೇಳಿರುವುದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.

“ಸಮಾಜದ ಶಾಸಕರ ಟಿಕೆಟ್ ತಪ್ಪಿಸಲು ರೂಪಿಸಿದ ರಾಜಕೀಯ ಷಡ್ಯಂತ್ರ ಇದಲ್ಲದೆ ಮತ್ತೇನೂ ಅಲ್ಲ. ನನ್ನ ಹಿನ್ನೆಲೆ ಪರಿಶೀಲಿಸಿ, ನಾನು ಯಾರನ್ನೂ ಸಿಕ್ಕಿಸಿಲ್ಲ” ಎಂದು ಸೋನು ಲಮಾಣಿ ಹೇಳಿದರು. 18ರಂದು ತಾವು ಬೆಂಗಳೂರಿನಲ್ಲಿ ಇದ್ದೆ, 21ರಂದು ಲೋಕಾಯುಕ್ತ ದಾಳಿ ನಡೆದಿದೆ ಎಂದು ವಿವರಿಸಿದರು. ಜೊತೆಗೆ, ಸ್ವಾಮೀಜಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.

ಶಿರಹಟ್ಟಿ ಕ್ಷೇತ್ರದಲ್ಲಿ ಪರ ವಿರೋಧ ಪ್ರತಿಭಟನೆಗಳು ಜೋರಾಗಿದ್ದು, ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೋರಾಟ ನಡೆಸಿದ್ದರೆ, ಇದೀಗ ಬಂಜಾರ ಸಮುದಾಯ ಜೈಲಿನಲ್ಲಿ ಇರುವ ಶಾಸಕರ ಪರವಾಗಿ ನಿಲ್ಲುವ ಮೂಲಕ ತಮ್ಮ ಬೆಂಬಲದ ಸಂದೇಶ ರವಾನಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande