ಕೆ.ಸಿ.ರೆಡ್ಡಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಕೆ.ಸಿ.ರೆಡ್ಡಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಕೆಜಿಎಫ್ನಲ್ಲಿ ನಿರ್ಮಾಣವಾಗಲಿರುವ ಕರ್ನಾಟಕ ರಾಜ್ಯ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಸ್ಮಾರಕ ನಿರ್ಮಾಣಕ್ಕೆ ಸಾರಿಗೆ ಸಚಿವ ಕೆ.ರಾಮಲಿಂಗಾರೆಡ್ಡಿ ಹಾಗೂ ಕೆ.ಜಿ.ಎಫ್ ಶಾಸಕಿ ರೂಪಕಲಾ ಶಶಿಧರ್ ಗುದ್ದಲಿ ಪೂಜೆ ನೆರವೇರಿಸಿದರು.


ಕೋಲಾರ, ೨೫ ಫೆಬ್ರವರಿ (ಹಿ.ಸ) :

ಆ್ಯಂಕರ್ : ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿಯವರು ವಿಧಾನ ಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಆನಂತರ ಕೆಂಗಲ್ ಹನುಮಂತಯ್ಯ ವಿಧಾನ ಸೌಧ ನಿರ್ಮಾಣದ ಯೋಜನೆಯನ್ನು ಮಾರ್ಪಾಟು ಮಾಡಿದರು. ವಿಧಾನ ಸೌಧ ಅಡಿಗಲ್ಲು ಕಾರ್ಯಕ್ರಮದಲ್ಲಿ ಅಂದಿನ ಪ್ರಧಾನಿ ನೆಹರು ಪಾಲ್ಗೊಂಡಿದ್ದರು. ನೆಹರು ಮತ್ತು ಮಹಾತ್ಮಾಗಾಂಧಿ ಜೊತೆಯಲ್ಲಿ ಕೆ.ಸಿ.ರೆಡ್ಡಿ ಒಳ್ಳೆಯ ಒಡನಾಟ ಹೊಂದಿದ್ದರು ಕೇಂದ್ರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಕೆ.ಸಿ.ರೆಡ್ಡಿಯವರು ಬೆಂಗಳೂರಿನಲ್ಲಿ ಹೆಚ್.ಎಂ.ಟಿ. ಬಿ.ಹೆಚ್.ಇ.ಎಲ್., ಐಟಿಐ ಸೇರಿದಂತೆ ಪ್ರಮುಖ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿದರು. ಅಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ಯಮೆಗಳಲ್ಲಿ ಒಂದು ಲಕ್ಷ ಮಂದಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲಾಗಿತ್ತು ಎಂದು ಕೆ.ಸಿ.ರೆಡ್ಡಿಯವರ ಕೊಡುಗೆಯನ್ನು ಸಾರಿಗೆ ಸಚಿವ ಕೆ.ರಾಮಲಿಂಗಾರೆಡ್ಡಿ ಸ್ಮರಿಸಿದರು.

ಸ್ವಾತಂತ್ರö್ಯ ಹೋರಾಟಗಾರ ಹಾಗೂ ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಸ್ಮಾರಕ ನಿರ್ಮಾಣಕ್ಕೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಬುಧವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಕೆ.ಸಿ. ರೆಡ್ಡಿಯವರು ಕೇಂದ್ರ ಕೈಗಾರಿಕಾ ಸಚಿವರಾಗಿದ್ದಾಗ ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಲಾಯಿತು. ಅಂದಿನ ಕೇಂದ್ರ ಸರ್ಕಾರದ ಬಜೆಟ್ ಕೇವಲ ೨೦೦ ಕೋಟಿ ಆಗಿತ್ತು. ಕೆಜಿಎಫ್ನ ಬೆಮಲ್ ಸೇರಿದಂತೆ ಬೆಂಗಳೂರಿನಲ್ಲಿ ಸಾಲು ಸಾಲು ಸಾರ್ವಜನಿಕ ವಲಯದಲ್ಲಿ ಉದ್ದಿಮೆಗಳನ್ನು ಆರಂಭಿಸಿ ಅಂದಿನ ಕಾಲದಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ ಒದಗಿಸಿದ್ದರು. ಇಂದಿನ ಬೆಂಗಳೂರು ನಗರ ಕೈಗಾರಿಕಾ ಉದ್ಯಮಾ ವಲಯವಾಗಿ ಬೆಳೆಯಲು ಕೆ.ಸಿ.ರೆಡ್ಡಿಯವರು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಇತಿಹಾಸವನ್ನು ಮೆಲುಕು ಹಾಕಿದರು.

ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ ಕೆ.ಸಿ.ರೆಡ್ಡಿಯವರ ಜೀವನ ಚರಿತ್ರೆಯನ್ನು ಗುರುತಿಸಲು ಹಾಗೂ ಇತಿಹಾಸದಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಮೆಲುಕು ಹಾಕಲು ಕೆಜಿಎಫ್ನಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ. ಈ ಹಿಂದೆ ಕ್ಯಾಸಂಬಳ್ಳಿ ಬಳಿ ಸ್ಮಾರಕ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿತ್ತು. ಎಲ್ಲರ ಆಶಯದಂತೆ ಕೆಜಿಎಫ್ನ ರಾಬರ್ಟ್ಸನ್ ಪೇಟೆ ಸ್ಯಾನಿಟರಿ ಬೋರ್ಡ್ಗೆ ಸೇರಿದ ನಿವೇಶನದಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ. ಸ್ಮಾರಕ ಕೆ.ಸಿ.ರೆಡ್ಡಿಯವರ ಸ್ವಾತಂತ್ರö್ಯ ಹೋರಾಟ, ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿ ರಾಜ್ಯ ಮತ್ತು ದೇಶಕ್ಕೆ ನೀಡಿದ ಕೊಡುಗೆಯನ್ನು ಬಿಂಬಸಲಿದೆ ಎಂದು ತಿಳಿಸಿದರು.

ಕೆ.ಸಿ.ರೆಡ್ಡಿ ಸ್ಮಾರಕ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಿವಂಗತ ನಾರಾಯಣರೆಡ್ಡಿ ಶ್ರಮಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕಡತ ಅನುಮೋದನೆ ಆಗಲು ನಾರಾಯಣರೆಡ್ಡಿ ಅಲೆದಾಡಿದ್ದರು. ಸ್ಮಾರಕ ನಿರ್ಮಾಣ ಮತ್ತು ಅಗತ್ಯವಿರುವ ಅನುದಾನ ಬಿಡುಗಡೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೆರವಾಗಿದ್ದಾರೆ. ಅವರು ಸದಾ ನಮ್ಮ ಬೆಂಬಲಕ್ಕೆ ನಿಂತಿದ್ದು, ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಕೆ.ಸಿ.ರೆಡ್ಡಿಯವರ ನೆನಪಿನಲ್ಲಿ ವಿದ್ಯಾಸಂಸ್ಥೆಗಳನ್ನು ಆರಂಭಿಸಲಾಗುವುದು. ಸ್ಮಾರಕದ ನಿರ್ವಹಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲಾಗುವುದು. ೪ ಕೋಟಿ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ಸ್ಮಾರಕಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಕೆ.ಸಿ.ರಾಮಮೂರ್ತಿ, ಕೆಜಿಎಫ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಜಶೇಖರ ಬಾಬು, ಕ್ಯಾಸಂಬಳ್ಳಿಯ ಕೆ.ವಿ. ವೆಂಕಟಶಿವಾರೆಡ್ಡಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ರಾಧಾಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅ.ಮು. ಲಕ್ಷಿö್ಮ ನಾರಾಯಣ್, ಪದ್ಮನಾಭರೆಡ್ಡಿ, ಕವಿತಾ ವಸಂತರೆಡ್ಡಿ, ಕೆಜಿಎಫ್ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ನರಸಿಂಹಮೂರ್ತಿ ಭಾಗಿಯಾಗಿದ್ದರು.

ಚಿತ್ರ : ಕೆಜಿಎಫ್ನಲ್ಲಿ ನಿರ್ಮಾಣವಾಗಲಿರುವ ಕರ್ನಾಟಕ ರಾಜ್ಯ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಸ್ಮಾರಕ ನಿರ್ಮಾಣಕ್ಕೆ ಸಾರಿಗೆ ಸಚಿವ ಕೆ.ರಾಮಲಿಂಗಾರೆಡ್ಡಿ ಹಾಗೂ ಕೆ.ಜಿ.ಎಫ್ ಶಾಸಕಿ ರೂಪಕಲಾ ಶಶಿಧರ್ ಗುದ್ದಲಿ ಪೂಜೆ ನೆರವೇರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande