ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ಯುವಕನ ಕುಟುಂಬ
ಬೆಂಗಳೂರು, 25 ಫೆಬ್ರವರಿ (ಹಿ.ಸ.): ಆ್ಯಂಕರ್:ದಾನಗಳಲ್ಲಿ ಶ್ರೇಷ್ಠವೆಂದೇ ಪರಿಗಣಿಸಲ್ಪಡುವ ಅಂಗಾಂಗ ದಾನ ಮತ್ತೊಮ್ಮೆ ಆರು ಮಂದಿಯ ಬದುಕಿಗೆ ಬೆಳಕು ತುಂಬಿದೆ. ಮಂಡ್ಯ ಜಿಲ್ಲೆಯ ಕಸಬಾ ಹೋಬಳಿಯ ಚಿಕ್ಕಮಂಡ್ಯ ಗ್ರಾಮದ ಯುವಕನ ಕುಟುಂಬ ಧೈರ್ಯದಿಂದ ಕೈಗೊಂಡ ನಿರ್ಧಾರವು ಮಾನವೀಯತೆಯ ಮಹತ್ವವನ್ನು ಎತ್ತಿಹಿಡಿದಿದ
Darshan


ಬೆಂಗಳೂರು, 25 ಫೆಬ್ರವರಿ (ಹಿ.ಸ.):

ಆ್ಯಂಕರ್:ದಾನಗಳಲ್ಲಿ ಶ್ರೇಷ್ಠವೆಂದೇ ಪರಿಗಣಿಸಲ್ಪಡುವ ಅಂಗಾಂಗ ದಾನ ಮತ್ತೊಮ್ಮೆ ಆರು ಮಂದಿಯ ಬದುಕಿಗೆ ಬೆಳಕು ತುಂಬಿದೆ. ಮಂಡ್ಯ ಜಿಲ್ಲೆಯ ಕಸಬಾ ಹೋಬಳಿಯ ಚಿಕ್ಕಮಂಡ್ಯ ಗ್ರಾಮದ ಯುವಕನ ಕುಟುಂಬ ಧೈರ್ಯದಿಂದ ಕೈಗೊಂಡ ನಿರ್ಧಾರವು ಮಾನವೀಯತೆಯ ಮಹತ್ವವನ್ನು ಎತ್ತಿಹಿಡಿದಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ನಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೈಗೆಟಕುವ ವೆಚ್ಚದಲ್ಲಿ ಈ ಸೇವೆಯನ್ನು ಒದಗಿಸಿರುವುದು ವಿಶೇಷವಾಗಿದ್ದು, ವೈದ್ಯರ ತಂಡದ ಸಾರ್ಥಕ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕುರಿತು ಮಾಹಿತಿ ನೀಡಿದ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ದೀಪಕ್ ಹಾಗೂ ಟ್ರಾಮಾ ಎಮರ್ಜೆನ್ಸಿ ಕೇರ್ ಸೆಂಟರ್ನ ವಿಶೇಷ ಅಧಿಕಾರಿ ಡಾ. ಅಸೀಮಾ ಬಾನು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವೈದ್ಯರು ಹಾಗೂ ‘ಜೀವ ಸಾರ್ಥಕತೆ’ ತಂಡದ ಸಮನ್ವಯದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 22ರಂದು ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ದರ್ಶನ್ (ದಿನೇಶ್) ಎಂಬ ಯುವಕನು ಮೊದಲಿಗೆ ಮನೆಗೆ ತೆರಳಿ ಮಲಗಿದ್ದರೂ, ನಂತರ ಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಯಿತು. ತಲೆಯೊಳಗಿನ ರಕ್ತಸ್ರಾವ ಪತ್ತೆಯಾಗುತ್ತಿದ್ದಂತೆ ಅವರನ್ನು ತಕ್ಷಣವೇ ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್ಗೆ ಸಾಗಿಸಲಾಯಿತು. ಹಲವಾರು ಚಿಕಿತ್ಸಾ ಪ್ರಯತ್ನಗಳ ಬಳಿಕವೂ ಸ್ಪಂದನೆ ಕಾಣದ ಕಾರಣ, ತಜ್ಞರ ತಂಡವು ಅವರನ್ನು “ಬ್ರೇನ್ ಡೆಡ್” ಎಂದು ಘೋಷಿಸಿತು.

ಈ ದುಃಖದ ಸಂದರ್ಭದಲ್ಲೂ ಕುಟುಂಬ ಸದಸ್ಯರು ಮಾನವೀಯತೆ ಮೆರೆದಿದ್ದು, ಅಂಗಾಂಗ ದಾನಕ್ಕೆ ಸಮ್ಮತಿಸಿದರು. ಜೀವ ಸಾರ್ಥಕತೆ ತಂಡದ ಸಮಾಲೋಚನೆಯ ಬಳಿಕ ಯಕೃತ್ತು, ಮೂತ್ರಪಿಂಡಗಳು, ಹೃದಯ ನಾಳಗಳು ಸೇರಿದಂತೆ ವಿವಿಧ ಅಂಗಾಂಗಗಳನ್ನು ಅಗತ್ಯವಿದ್ದ ರೋಗಿಗಳಿಗೆ ಅಳವಡಿಸಲಾಗಿದೆ. ಈ ಮೂಲಕ ಆರು ಮಂದಿಯ ಬದುಕಿಗೆ ಹೊಸ ಆಶಾಕಿರಣ ಮೂಡಿದೆ.

ನೋವಿನ ಸಮಯದಲ್ಲೂ ಸಮಾಜ ಸೇವೆಯ ಮಹತ್ವ ಅರಿತು ನಿರ್ಧಾರ ಕೈಗೊಂಡ ಕುಟುಂಬ ಸದಸ್ಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ವೈದ್ಯರ ತಂಡ ಕೃತಜ್ಞತೆ ವ್ಯಕ್ತಪಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande