ಜನತಾ ಕಾಲೋನಿಯ ಜನರ ಅಳಲು ಕೇಳೋರು ಯಾರು.?
ಗದಗ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗದಗ ನಗರದ ವಾರ್ಡ್ ನಂ.16ರ ಹೊಂಬಳನಾಕಾ ಜನತಾ ಕಾಲೋನಿ ಕಳೆದ ನಾಲ್ಕು ದಶಕಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದು, ಕಾಲೋನಿಯ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅ
ಫೋಟೋ


ಗದಗ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗದಗ ನಗರದ ವಾರ್ಡ್ ನಂ.16ರ ಹೊಂಬಳನಾಕಾ ಜನತಾ ಕಾಲೋನಿ ಕಳೆದ ನಾಲ್ಕು ದಶಕಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದು, ಕಾಲೋನಿಯ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಕಾಲೋನಿಯಲ್ಲಿ ರಸ್ತೆ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ಗಳು ಪ್ರವೇಶಿಸಲು ಸಾಧ್ಯವಿಲ್ಲ. ಮನೆಗಳಿಗೆ ಬೆಂಕಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ದಳದ ವಾಹನಗಳು ಬರಲು ದಾರಿ ಇಲ್ಲ. ಕಡು ಬಡವರು ವಾಸಿಸುವ ಈ ಪ್ರದೇಶದ ಜನತೆ 40 ವರ್ಷಗಳಿಂದ ಜೀವಭಯದಲ್ಲೇ ಬದುಕುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದುವರಿದ ನಗರಗಳಂತೆ ಹೊಂಬಳನಾಕಾ ಜನತಾ ಕಾಲೋನಿಗೂ ಸುಸಜ್ಜಿತ ರಸ್ತೆ, ಚರಂಡಿ ವ್ಯವಸ್ಥೆ, ಬಡ ಮಕ್ಕಳಿಗೆ ಉದ್ಯಾನವನ (ಪಾರ್ಕ್) ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಮುದಾಯ ಭವನ ಅಗತ್ಯವಿದೆ ಎಂಬುದು ನಿವಾಸಿಗಳ ಬಹುದಿನಗಳ ಕನಸಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಗದಗ-ಬೆಟಗೇರಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲಕ್ಷ್ಮಣ ಜೋಗದಂಡಕರ ಅವರು ಬಡವರ ಪರ ಕಾಳಜಿಯುಳ್ಳವರಾಗಿದ್ದು, ಸಚಿವ ಎಚ್.ಕೆ. ಪಾಟೀಲರ ಪುತ್ರರಾದ ಕೃಷ್ಣಗೌಡ್ರ ಪಾಟೀಲರ ಸೂಚನೆಯಂತೆ ಕಾಮಗಾರಿಗೆ ಸಂಬಂಧಿಸಿದ ವರದಿ ಸಿದ್ಧಪಡಿಸಿದ್ದಾರೆ.

ರಸ್ತೆ ಕಾಮಗಾರಿಗಾಗಿ 45 ಲಕ್ಷ ರೂಪಾಯಿ ಅನುದಾನವನ್ನೂ ಒದಗಿಸಲಾಗಿದ್ದು, ಹಣ ಬಿಡುಗಡೆಯಾಗಿ ಹಲವು ದಿನಗಳಾಗಿದ್ದರೂ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ ಎಂದು ಕೃಷ್ಣಾ ಹಡಪದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ವಿಳಂಬ ಧೋರಣೆಯೋ ಅಥವಾ ಅಜ್ಞಾತ ಶಕ್ತಿಗಳ ಅಡೆತಡೆಯೋ ತಿಳಿಯದಿದ್ದರೂ, ಕೆಲಸ ಮಾತ್ರ ಸ್ಥಗಿತಗೊಂಡಿರುವುದು ಕಾಲೋನಿಯ ಜನರಲ್ಲಿ ಆಕ್ರೋಶ ಮೂಡಿಸಿದೆ. ಅಧಿಕಾರಿಗಳಿಗೆ ಕೆಲಸ ಮಾಡಲು ಶಕ್ತಿ ತುಂಬಲು ಮತ್ತು ಅಡೆತಡೆಗಳನ್ನು ನಿವಾರಿಸಲು ಬಡವರ ಹಿತಚಿಂತಕರಾದ ಕೃಷ್ಣಗೌಡ್ರ ಪಾಟೀಲರ ಭೇಟಿ ಅನಿವಾರ್ಯವಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

“ಕೃಷ್ಣಗೌಡ್ರ ಪಾಟೀಲರು ಒಮ್ಮೆ ನಮ್ಮ ಹೊಂಬಳನಾಕಾ ಜನತಾ ಕಾಲೋನಿಗೆ ಕಾಲಿಟ್ಟರೆ ಸಾಕು, ಇಲ್ಲಿನ ಸಮಸ್ಯೆಗಳೆಲ್ಲ ಬಗೆಹರಿಯುತ್ತವೆ ಎಂಬ ಅಚಲ ವಿಶ್ವಾಸ ನಿವಾಸಿಗಳಲ್ಲಿದೆ. ಆದ್ದರಿಂದ ಅವರು ಶೀಘ್ರವೇ ಭೇಟಿ ನೀಡಿ 40 ವರ್ಷಗಳ ನರಕಯಾತನೆಗೆ ಅಂತ್ಯ ಹಾಡಬೇಕು” ಎಂದು ಕಾಲೋನಿಯ ಸಮಸ್ತ ನಿವಾಸಿಗಳ ಪರವಾಗಿ ಕೃಷ್ಣಾ ಎಚ್. ಹಡಪದ ಅವರು ಕಳಕಳಿಯಿಂದ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande