ಅನ್ನದಾತರಿಗೆ ಅಕಾಲಿಕ ಮಳೆ ರೈತರಲ್ಲಿ ಆತಂಕ
ಗದಗ, 24 ಫೆಬ್ರವರಿ (ಹಿ.ಸ.): ಆ್ಯಂಕರ್: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಗದಗ ಜಿಲ್ಲೆಯ ವಿವಿಧೆಡೆ ಹಾಗೂ ಡಂಬಳ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಕಾಲಿಕ ಮಳೆ ಸುರಿದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಜೋಳ, ಕಡ್ಲೆ, ಗೋಧಿ ಹಾಗೂ ಸೂರ್ಯಕಾಂತಿ ಸೇರಿದಂತೆ ಪ್ರಮುಖ ಬೆಳೆಗಳಿಗೆ
ಫೋಟೋ


ಗದಗ, 24 ಫೆಬ್ರವರಿ (ಹಿ.ಸ.):

ಆ್ಯಂಕರ್:

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಗದಗ ಜಿಲ್ಲೆಯ ವಿವಿಧೆಡೆ ಹಾಗೂ ಡಂಬಳ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಕಾಲಿಕ ಮಳೆ ಸುರಿದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಜೋಳ, ಕಡ್ಲೆ, ಗೋಧಿ ಹಾಗೂ ಸೂರ್ಯಕಾಂತಿ ಸೇರಿದಂತೆ ಪ್ರಮುಖ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ.

ಮಳೆಯ ಪರಿಣಾಮವಾಗಿ ಜೋಳದ ಕಾಳುಗಳಲ್ಲಿ ತೇವಾಂಶ ಹೆಚ್ಚಾಗಿ ಗುಣಮಟ್ಟ ಕುಸಿಯುವ ಭೀತಿ ಎದುರಾಗಿದೆ. ಕಟಾವಿಗೆ ಬಂದಿರುವ ಕಡ್ಲೆ ಬೆಳೆ ಮಳೆಯಿಂದ ಹಾನಿಗೊಳಗಾಗುವ ಆತಂಕವಿದ್ದು, ಸೂರ್ಯಕಾಂತಿ ಬೆಳೆ ಹೂವಿನ ಹಂತದಲ್ಲಿರುವುದರಿಂದ ಮಳೆ ಮುಂದುವರಿದರೆ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಮೇವು ಸಂರಕ್ಷಣೆಗೆ ರೈತರ ಹರಸಾಹಸ

ಅಕಾಲಿಕ ಮಳೆಯಿಂದ ಜೋಳದ ಮೇವು ಹಾಗೂ ಸೆಂಗಾಹೊಟ್ಟು ಹಾನಿಯಾಗದಂತೆ ರೈತರು ತಾಡಫಲಗಳಿಂದ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಹೊಲಗಳಲ್ಲಿ ನೀರು ನಿಲ್ಲದಂತೆ ಕಾಲುವೆ ತೆಗೆಯುವುದು, ಮೇವನ್ನು ಎತ್ತಿ ಒಣಗಿಸುವುದು ಸೇರಿದಂತೆ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇಟ್ಟಂಗಿ ಬಟ್ಟಿಗಳಿಗೂ ಹೊಡೆತ

ಈ ಭಾಗದ ಗುಡಿಕೈಗಾರಿಕೆಯಾಗಿರುವ ಇಟ್ಟಂಗಿ ಬಟ್ಟಿಗಳಲ್ಲೂ ಮಳೆಯ ಪರಿಣಾಮ ಗೋಚರಿಸಿದೆ. ತಯಾರಿಸಿದ ಇಟ್ಟಂಗಿಗಳನ್ನು ಮಳೆಯಿಂದ ರಕ್ಷಿಸಲು ತಾಡಫಲಗಳಿಗೆ ಮೊರೆ ಹೋಗಲಾಗಿದೆ. ಲಕ್ಷಾಂತರ ರೂಪಾಯಿ ಸಾಲದಲ್ಲಿ ತಯಾರಿಸಿದ ಇಟ್ಟಂಗಿಗಳಿಗೆ ಹಾನಿಯಾಗುವ ಭೀತಿ ಇದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಮಾವು, ಹುಣಸೆ ಬೆಳೆಗಾರರಲ್ಲಿ ಆತಂಕ

ಮಾವು ಗಿಡಗಳಲ್ಲಿ ಹೂವು ಹಾಗೂ ಸಣ್ಣ ಕಾಯಿಗಳು ಇರುವ ಹಂತದಲ್ಲಿ ಮಳೆ ಸುರಿದಿರುವುದರಿಂದ ಅವು ಉದುರುವ ಆತಂಕ ವ್ಯಕ್ತವಾಗಿದೆ. ಬೇಸಿಗೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಹುಣಸೆಹಣ್ಣಿನ ಮೇಲೂ ಮಳೆಯ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

“ಜೋಳ ಹಾಗೂ ಸೂರ್ಯಕಾಂತಿ ಬೆಳೆ ಹೂವಿನ ಹಂತದಲ್ಲಿವೆ. ಕಡ್ಲೆ ಬೆಳೆ ಕಟಾವಿಗೆ ಬಂದಿದೆ. ಇಂತಹ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದರೆ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ,” ಎಂದು ಯಮನೂರ ದೊಡ್ಡಮನಿ, ನಿಂಗಪ್ಪ ಪಲ್ಲೇದ, ಸಿದ್ದಪ್ಪ ಹಡಪದ, ಭೀಮಪ್ಪ ಗದಗಿನ, ರಾಮಣ್ಣ ಹೊಸಗೇರಿ ಹಾಗೂ ರಫೀಕ ಹೊಂಬಳ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಅಕಾಲಿಕ ಮಳೆ ಡಂಬಳ ಹೋಬಳಿಯ ರೈತರಲ್ಲಿ ಅನಿಶ್ಚಿತತೆ ಮತ್ತು ಆತಂಕವನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande