
ಗದಗ, 24 ಫೆಬ್ರವರಿ (ಹಿ.ಸ.):
ಆ್ಯಂಕರ್:
ವಿಜ್ಞಾನ ವಸ್ತು ಪ್ರದರ್ಶನಗಳಂತಹ ವೇದಿಕೆಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದರ ಜೊತೆಗೆ ಸೃಜನಶೀಲತೆ, ಕೌಶಲ ಮತ್ತು ಕ್ರಿಯಾಶೀಲತೆಯನ್ನು ಹೊರಹಾಕಲು ಉತ್ತಮ ಅವಕಾಶ ಒದಗಿಸುತ್ತವೆ ಎಂದು ಗದಗ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯದ ವಿಷಯ ಪರಿವೀಕ್ಷಕರು (ವಿಜ್ಞಾನ) ಹಾಗೂ ನೋಡಲ್ ಅಧಿಕಾರಿಗಳಾದ ಎಸ್. ಎಚ್. ಬಂಡಿವಡ್ಡರ ಹೇಳಿದರು.
ಗದಗ ಜಿಲ್ಲಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ರೋಣ ಹಾಗೂ ಗದಗ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯದ ಆಶ್ರಯದಲ್ಲಿ, ಗೋಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜ್ಞಾನವನ್ನು ಕೇವಲ ಪಾಠಪುಸ್ತಕಗಳಲ್ಲಿನ ವಿಷಯವಾಗಿ ಮಾತ್ರ ನೋಡದೆ, ಸಮಾಜದಲ್ಲಿನ ಸಮಸ್ಯೆಗಳ ಪರಿಹಾರದ ಸಾಧನವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕ ಅಧ್ಯಯನ ಹಾಗೂ ವೈಜ್ಞಾನಿಕ ಚಟುವಟಿಕೆಗಳು ಅತ್ಯಂತ ಅಗತ್ಯವೆಂದರು. ವಿದ್ಯಾರ್ಥಿ ಜೀವನದಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮಳೆನೀರು ಸಂಗ್ರಹಣೆ ಮತ್ತು ಮರುಬಳಕೆ (ಮಳೆನೀರು ಕೊಯ್ದು), ಕೃಷಿಯಲ್ಲಿ ನೀರಿನ ಉಳಿತಾಯಕ್ಕೆ ನೆರವಾಗುವ ಸ್ಮಾರ್ಟ್ ವಾಟರ್ ವ್ಯವಸ್ಥೆ, ತ್ಯಾಜ್ಯ ನೀರು ಶುದ್ಧೀಕರಣ ಮಾದರಿ, ಭೂಮಿಯ ತಾಪಮಾನ ಏರಿಕೆಯನ್ನು ವಿವರಿಸುವ ಹಸಿರುಮನೆ ಪರಿಣಾಮ, ರಾಕೆಟ್ ಹಾಗೂ ಬಾಹ್ಯಾಕಾಶ ಸಂಶೋಧನಾ ಮಾದರಿ, ಸೌರವ್ಯೂಹದ ಚಲನಾ ಮಾದರಿ, ಸಸ್ಯ ಮತ್ತು ಪ್ರಾಣಿ ಜೀವಕೋಶಗಳ ಒಳರಚನೆ, ಆಟೋಮ್ಯಾಟಿಕ್ ಫಿಲ್ಲಿಂಗ್ ಮಷಿನ್, ಸ್ಮಾರ್ಟ್ ಗೋ ಹೌಸ್ (ಸ್ವಯಂಚಾಲಿತ ಗೋಶಾಲೆ ವ್ಯವಸ್ಥೆ) ಸೇರಿದಂತೆ ಅನೇಕ ಸೃಜನಾತ್ಮಕ ಮಾದರಿಗಳನ್ನು ಪ್ರದರ್ಶಿಸಿದರು.
ತಮ್ಮ ಮಾದರಿಗಳ ಕಾರ್ಯವಿಧಾನವನ್ನು ಆತ್ಮವಿಶ್ವಾಸದಿಂದ ವಿವರಿಸಿ ವಿದ್ಯಾರ್ಥಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವುದು ಹಾಗೂ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನ ವಿಷಯಗಳತ್ತ ಆಸಕ್ತಿ ಮೂಡಿಸುವ ಉದ್ದೇಶದಿಂದ ಇಂತಹ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿದ ಮಾದರಿಗಳು ನೋಡುಗರ ಗಮನಸೆಳೆದವು.
ಕಾರ್ಯಕ್ರಮದಲ್ಲಿ ಕೆ. ಎಸ್. ಕೊಡತಗೇರಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಟಿ. ಸಿ. ನಾಗನೂರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ. ಎ. ಅಂಗಡಿ, ಭಾಗ್ಯಶ್ರೀ ಎಂ. ಗವಿ ಭೋಸಲೆ, ದುರಗಪ್ಪ ಬೂದಿಹಾಳ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗರಸಿಕೊಪ್ಪ, ಸರ್ಕಾರಿ ಪ್ರೌಢಶಾಲೆ ಗೋಗೇರಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಗೋಗೇರಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಡಾವಣೆ ಗೋಗೇರಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP