
ವಿಜಯಪುರ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮುಂಬರುವ ದಿನಗಳಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಪಂ ಸಿಇಒ ರಿಷಿ ಆನಂದ ಅಧಿಕಾರಿಗಳಿಗೆ ಸೂಚಿಸಿದರು.
ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣಾ ಕ್ರಮಗಳ ಕುರಿತು ನಗರದ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಶಿಕ್ಷಕರು ಸಮನ್ವಯ ಸಾಧಿಸಿ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ವಿನೂತನ ಚಟುವಟಿಕೆಗಳನ್ನು ನಡೆಸಬೇಕು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಲ್ಲಿ ನೀವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಇಲಾಖೆಗೆ ಹಿಂದಿನ ವರ್ಷಗಳ ಮಾದರಿ ಪ್ರಶ್ನೆ ಪತ್ರಿಕೆ ವಿತರಿಸಲಾಗಿದೆ. ಈ ಪ್ರಶ್ನೆ ಪತ್ರಿಕೆಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಬೇಕು. ನಿಮ್ಮ ಕಡೆಯಿಂದ ಶೇ.100ರಷ್ಟು ಪ್ರಯತ್ನ ಮಾಡಬೇಕು. ಇದರಲ್ಲಿ ಮುಖ್ಯ ಶಿಕ್ಷಕರು ಹೆಚ್ಚು ಪ್ರಯತ್ನ ಮಾಡಬೇಕು ಎಂದರು.
ನಮ್ಮ ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.100ರಷ್ಟು ಫಲಿತಾಂಶ ಸಾಧಿಸಲು ನಿಮ್ಮ ಪ್ರಯತ್ನ ಅತೀ ಮುಖ್ಯವಾದದ್ದು. ವಾರ್ಷಿಕ ಪರೀಕ್ಷೆಗೆ ಇನ್ನೂ 15 ರಿಂದ 20 ದಿನಗಳ ಸಮಯವಿದೆ. ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮೇಲೆ ಅತೀ ಹೆಚ್ಚು ನಿಗಾವಹಿಸಿ ಕಡಿಮೆ ಅಂಕ ಪಡೆದ ವಿಷಯದ ಮೇಲೆ ಹೆಚ್ಚು ಅಭ್ಯಾಸ ಮಾಡಿಸಬೇಕು ಎಂದರು.
ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಪಡೆಯಲು ಕಾರಣಗಳೇನು ಎಂಬುದನ್ನು ವಿಶ್ಲೇಷಣೆಗೊಳಿಸಬೇಕು. ಸಮಸ್ಯೆಗಳನ್ನು ಪರಿಹರಿಸಿ ವಿದ್ಯಾರ್ಥಿಗಳ ಗೊಂದಲಗಳನ್ನು ಹೋಗಲಾಡಿಸಿ, ಉತ್ತಮ ಅಂಕ ಪಡೆಯಲು ಪ್ರೇರಣೆ ನೀಡಬೇಕು. ಏಕೆಂದರೆ ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಯು ಬಹಳ ಪ್ರಮುಖ ಘಟ್ಟವಾಗಿದ್ದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದಲ್ಲಿ ಮಾತ್ರ ಅವರು ಉನ್ನತ ಶಿಕ್ಷಣ ಪಡೆಯಲು ಸಹಾಯಕವಾಗುತ್ತದೆ ಮತ್ತು ಉತ್ತಮ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದರು.
ಇಂದಿನಿಂದ ಕಡ್ಡಾಯವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.100 ರಷ್ಟು ಇರುವಂತೆ ನಿಗಾವಹಿಸಬೇಕು. ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿದಿನ ಎಲ್ಲಾ ವಿಷಯಗಳ ಮೇಲೆ ರಿವಿಜನ್ ಮಾಡಿಸಬೇಕು. ಪ್ರತಿ 2 ದಿನಕ್ಕೊಮ್ಮೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಕರೊಂದಿಗೆ ವಿಡಿಯೋ ಸಂವಾದ ಏರ್ಪಡಿಸಿ, ಮಾರ್ಗದರ್ಶನ ನೀಡಬೇಕು ಮತ್ತು ಪರೀಕ್ಷಾ ಪೂರ್ವ ಸಿದ್ಧತಾ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಫಲಿತಾಂಶ ಹೆಚ್ಚಳಕ್ಕೆ ಪ್ರತಿದಿನ ಚಟುವಟಿಕೆ ರೂಪಿಸಿ, ಕಲಿಕಾ ಪ್ರಗತಿಯಾಗುವಂತೆ ಶ್ರಮವಹಿಸಬೇಕು. ವಾರ್ಷಿಕ ಪರೀಕ್ಷೆ ಹತ್ತಿರವಾಗಿರುವುದರಿಂದ ಈಗಿನಿಂದಲೇ ಮಕ್ಕಳಿಗೆ ನಿರಂತರವಾಗಿ ಅಧ್ಯಯನ, ಬರವಣಿಗೆ ರೂಢಿ ಹಾಗೂ ವಿಶೇಷ ತರಗತಿಗಳ ಆಯೋಜನೆ ಮಾಡಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸಬೇಕು. ಶಿಕ್ಷಕರು ಪ್ರತಿ ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಿ, ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಕಡ್ಡಾಯವಾಗಿ ಮುಂದಿನ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ವೀರಯ್ಯಾ ಸಾಲಿಮಠ, ಪರೀಕ್ಷಾ ನೊಡೆಲ್ ಅಧಿಕಾರಿಗಳು, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪೂರ್ವ ಸಿದ್ಧತಾ ಪರೀಕ್ಷೆ-02 ರಲ್ಲಿ ಶೇ.50 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande