ಆಲಸ್ಯ ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಎಚ್ಚರಿಕೆ
ಧಾರವಾಡದಲ್ಲಿ ಜಿಲ್ಲಾಮಟ್ಟದ 12 ನೇ ಜನತಾ ದರ್ಶನ
ಜನತಾ ದರ್ಶನ


ಧಾರವಾಡ, 24 ಫೆಬ್ರವರಿ (ಹಿ.ಸ.):

ಆ್ಯಂಕರ್:

ನಮಗೆಲ್ಲರಿಗೂ ಇರುವ ಸಂಬಳ, ಸವಲತ್ತು ಸಾರ್ವಜನಿಕರಿಂದ ಬಂದಿದ್ದು, ನಮ್ಮ ನಮ್ಮ ಕೆಲಸ, ಕರ್ತವ್ಯಗಳನ್ನು ಮಾನವೀಯತೆ, ಆತ್ಮಸಾಕ್ಷಿಯಿಂದ ಮಾಡಬೇಕು. ವಿನಾಕಾರಣ ವಿಳಂಬ, ಉದ್ಯೋಗದಲ್ಲಿ ಆಲಸ್ಯ ತೋರಿಸುವ ಮತ್ತು ನಡಿತೈತಿ ಬಿಡು ಎನ್ನುವ ಮನೋಭಾವನೆಯ ಅಧಿಕಾರಿ, ಸಿಬ್ಬಂದಿಗಳು ಮನೆಗೆ ಹೋಗಬಹುದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಧಾರವಾಡ ಜಿಲ್ಲಾಡಳಿತವು ಆಯೋಜಿಸಿದ್ದ ಜಿಲ್ಲಾ ಮಟ್ಟದ 12 ನೇ ಜನತಾ ದರ್ಶನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ, ಮಾತನಾಡಿದರು.

ಜನತಾ ದರ್ಶನದಲ್ಲಿ ಬರುವ ಅರ್ಜಿಗಳನ್ನು ಗಮನಿಸಿದಾಗ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಉತ್ತರಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಸಲ್ಲಿಕೆ ಆಗುವ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡಬೇಕು. ಬೇರೆ ಹಂತಕ್ಕೆ ಅರ್ಜಿ ರವಾನಿಸಬೇಕಾದಲ್ಲಿ ಅರ್ಜಿದಾರನಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಆದರೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಸಾರ್ವಜನಿಕ ಕಳಕಳಿ, ಮಾನವೀಯತೆ ನೋಡದೆ ಯಾಂತ್ರಿಕವಾಗಿ ವರ್ತಿಸುತ್ತಿದ್ದಾರೆ ಎಂಬುದು ಸಲ್ಲಿಕೆ ಆಗುತ್ತಿರುವ ಅರ್ಜಿಗಳಿಂದ ತಿಳಿದುಬರುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಅಧಿಕಾರಿ, ನೌಕರರು ಕರ್ತವ್ಯದಲ್ಲಿ ಅಶಿಸ್ತು ತೋರಿದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಜಿಲ್ಲಾ ಹಂತದ ಕಚೇರಿಗಳಿಗೆ, ಜನತಾ ದರ್ಶನಕ್ಕೆ ಬರುವುದು ಉಚಿತವಲ್ಲ. ಎಲ್ಲ ಅಧಿಕಾರಿ ಸಿಬ್ಬಂದಿ ತಮ್ಮ ಹಂತದಲ್ಲಿಯೇ ಸಾರ್ವಜನಿಕ ಸಮಸ್ಯೆಗಳನ್ನು ಸಂಯಮದಿಂದ ಆಲಿಸಿ, ಪರಿಹರಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿ, ಕಳುಹಿಸಬೇಕೆಂದು ಅವರು ಹೇಳಿದರು.

ವಿವಿಧ ಗ್ರಾಮಗಳಿಂದ ಹಾಗೂ ನಗರ ಪ್ರದೇಶಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಅಧಿಕಾರಿಗಳನ್ನು ಕರೆದು, ಚರ್ಚಿಸಿ, ಇತ್ಯರ್ಥಕ್ಕೆ ನಿರ್ದೇಶಿಸಿದರು.

ಇಂದಿನ ಜನತಾ ದರ್ಶನದಲ್ಲಿ ವಿವಿಧ ಇಲಾಖೆಗಳಿಗೆ ಸಂಭಂದಿಸಿದ 87 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿಯೇ, ಪರಿಶೀಲಿಸಿ, ಪರಿಹಾರಕ್ಕೆ ಸೂಚಿಸಿದರು.

ಜಿಲ್ಲಾಧಿಕಾರಿ ಸ್ನೇಹಲ್.ಆರ್., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಐಎಎಸ್ ಪ್ರೊಬೇಷನರ್ ಅಧಿಕಾರಿ ರೀತಿಕಾ ವರ್ಮಾ, ಉಪವಿಭಾಗಾಧಿಕಾರಿ ಶಾಲಂ ಹಿಸೇನ್ ವೇದಿಕೆಯಲ್ಲಿದ್ದು, ಸಾರ್ವಜನಿಕ ಅಹವಾಲು ಇತ್ಯರ್ಥಪಡಿಸಲು ಸಚಿವರಿಗೆ ನೇರವಾದರು.

ಜನತಾ ದರ್ಶನದಲ್ಲಿ ವಿವಿಧ ನಗರ, ಗ್ರಾಮಗಳ ನಾಗರಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande