
ಗದಗ, 24 ಫೆಬ್ರವರಿ (ಹಿ.ಸ.):
ಆ್ಯಂಕರ್:ಗದಗ ತಾಲೂಕಿನ ಮುಳಗುಂದ
ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಗವಿಮಠದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಮತ್ತು ಕುಟುಂಬ ಆರ್ಥಿಕ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರು ಅಭಿವೃದ್ಧಿ ಹೊಂದಿದಾಗ ಮಾತ್ರ ಕುಟುಂಬ ಆರ್ಥಿಕವಾಗಿ ಸದೃಢವಾಗುತ್ತದೆ ಎಂಬ ನಿಟ್ಟಿನಲ್ಲಿ ಹೆಮಾವತಿ ಅಮ್ಮ ಹಲವು ಯೋಜನೆಗಳನ್ನು ಜಾರಿಗೊಳಿಸಿ ಮಹಿಳೆಯರನ್ನು ಆರ್ಥಿಕ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಮಹಿಳೆಯರ ಬದುಕಿಗೆ ಭದ್ರತೆ ಮತ್ತು ಆತ್ಮವಿಶ್ವಾಸ ತುಂಬುವ ಅಮ್ಮನವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು
ಶಿರಹಟ್ಟಿ ತಾಲೂಕು ಯೋಜನಾಧಿಕಾರಿ ಪುನಿತ ಓಲೇಕಾರ ಮಾತನಾಡಿ, ಆಧುನಿಕ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಜ್ಞಾನವೂ ವಿಕಸಿಸಬೇಕು. ಈ ಉದ್ದೇಶದಿಂದ ಹೆಮಾವತಿ ಅಮ್ಮನವರು ಆರೋಗ್ಯ, ಶಿಕ್ಷಣ, ಕಾನೂನು ಜಾಗೃತಿ, ಪೌಷ್ಠಿಕ ಆಹಾರ ಕುರಿತು ಮಾಹಿತಿ, ಮಹಿಳಾ ವಿಚಾರಗೋಷ್ಠಿ ಹಾಗೂ ವಾತ್ಸಲ್ಯ ಯೋಜನೆಗಳ ಮೂಲಕ ಬಡವರು, ದೀನ-ದಲಿತರು ಹಾಗೂ ಸ್ವಉದ್ಯೋಗಕ್ಕೆ ಮುಂದಾಗುವ ಮಹಿಳೆಯರಿಗೆ ಸಹಾಯ ನೀಡುತ್ತಿದ್ದಾರೆ. ಇದರಿಂದ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರವಾಗುತ್ತಿದೆ ಎಂದರು.
ಎಸ್.ಸಿ. ಚವಡಿ ಮಾತನಾಡಿ, ಮಹಿಳೆಯರು ಅಭಿವೃದ್ಧಿ ಹೊಂದಿದರೆ ಸಮಾಜವೇ ಅಭಿವೃದ್ಧಿ ಹೊಂದುತ್ತದೆ. ಮನೆಯ ಮಕ್ಕಳು ಹಿರಿಯರನ್ನು ಅನುಕರಿಸುವುದರಿಂದ ಹಿರಿಯರು ಸಂಸ್ಕಾರಯುತ ಬದುಕನ್ನು ಕಟ್ಟಿಕೊಳ್ಳಬೇಕು. ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಕಾಶ ಮದ್ದಿನ, ಮಹೇಶ ನೀಲಗುಂದ, ಸಂಘದ ಮೇಲ್ವಿಚಾರಕಿ ಶಾಂತಾ ಸೇರಿದಂತೆ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP